ಮಂಗಳೂರು:ಮಂಗಳೂರು ದಸರಾ ವೇಳೆ ಸಂಪ್ರದಾಯ ಪ್ರಕಾರ ಹುಲಿವೇಷ ಕುಣಿತಕ್ಕೆ ಅವಕಾಶ ನೀಡಲು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇನೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.
ಮಂಗಳೂರಿನ ದಸರಾ ಸಂದರ್ಭದಲ್ಲಿ ಹುಲಿವೇಷ ಕುಣಿತಕ್ಕೆ ಅವಕಾಶ ನಿರಾಕರಿಸಿರುವ ಹಿನ್ನೆಲೆಯಲ್ಲಿ ಅವರು ಜಿಲ್ಲಾಧಿಕಾರಿಗಳಿಗೆ ಅವಕಾಶ ನೀಡುವಂತೆ ವಿನಂತಿಸಿದ್ದಾರೆ.
ದಸರಾ ಆಚರಣೆ ವೇಳೆ ದೇವಸ್ಥಾನದ ಸಂಪ್ರದಾಯಕ್ಕೆ ಯಾವುದೇ ಧಕ್ಕೆ ಬಾರದಂತೆ ಸೂಕ್ತ ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ಸಂಪ್ರದಾಯ ಪ್ರಕಾರ ಹುಲಿವೇಷ ಕುಣಿತಕ್ಕೆ ಈ ಬಾರಿ ಅವಕಾಶ ನೀಡಲು ಜಿಲ್ಲಾಡಳಿತ ನಿರ್ಧರಿಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಕಾರಣದಿಂದ ದಸರಾ ಸಂದರ್ಭದಲ್ಲಿ ಹುಲಿ ವೇಷ ಕುಣಿತಕ್ಕೆ ದ.ಕ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಆದರೆ ವಿವಿಧ ದೇವಸ್ಥಾನ ಹಾಗೂ ಶಾರದೋತ್ಸವ ಸಮಿತಿಯವರು ನನಗೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಕರಾವಳಿಯ ಸಂಸ್ಕೃತಿ, ಸಂಪ್ರದಾಯಕ್ಕೆ ಯಾವುದೇ ಧಕ್ಕೆ ಎದುರಾಗಬಾರದೆಂದು ಎಂಬ ಕಾರಣದಿಂದ ಜಿಲ್ಲಾಧಿಕಾರಿ ಜೊತೆಯಲ್ಲಿ ಹುಲಿವೇಷ ಕುಣಿತಕ್ಕೆ ಅವಕಾಶ ನೀಡುವಂತೆ ತಿಳಿಸಿದ್ದೇನೆ. ಜಿಲ್ಲಾಡಳಿತ ಅವಕಾಶ ನೀಡುವ ವಿಶ್ವಾಸವಿದ್ದು ಯಾರೂ ಕೂಡ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.