ಮಂಗಳೂರು: ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ನಿರ್ಮಾಣಗೊಂಡಿರುವ ಹೊಂಡಗಳನ್ನು ಮುಚ್ಚಿಸಿ ಹೆದ್ದಾರಿ ಮರು ಡಾಂಬರೀಕರಣಗೊಳಿಸುವಂತೆ ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ನೆಲ್ಯಾಡಿ ರಾಷ್ಟ್ರೀಯ ಹೆದ್ದಾರಿ 75ರ ಅಡ್ಡಹೊಳೆ-ಬಿ ಸಿ ರೋಡ್ ನಡುವಿನ ಚತುಷ್ಪಥ ರಸ್ತೆ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ನಿರ್ಮಾಣಗೊಂಡಿರುವ ಹೊಂಡಗಳನ್ನು ಮುಚ್ಚಿಸಿ ಹೆದ್ದಾರಿ ಮರು ಡಾಂಬರೀಕರಣಗೊಳಿಸುವ ಸಂಬಂಧ ಡಿಸಿಯವರನ್ನು ಭೇಟಿ ಮಾಡಲಾಯ್ತು. ಸೆ.30ರೊಳಗೆ ತಮ್ಮ ಮನವಿಗೆ ಸ್ಪಂದನೆ ಸಿಗದೇ ಇದ್ದಲ್ಲಿ ಅಕ್ಟೋಬರ್ 10ರಂದು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಮರುಡಾಂಬರೀಕರಣಗೊಳಿಸಲು ಡಿಸಿಗೆ ಮನವಿ.. ರಾಷ್ಟ್ರೀಯ ಹೆದ್ದಾರಿ75ರ ಶಿರಾಡಿ ಗ್ರಾಮದ ಅಡ್ಡಹೊಳೆ ಹಾಗೂ ಬಂಟ್ವಾಳ ತಾಲೂಕಿನ ಬಿ ಸಿ ರೋಡ್ ನಡುವೆ ಚತುಷ್ಪಥ ರಸ್ತೆ ನಿರ್ಮಾಣ ಹಿನ್ನೆಲೆಯಲ್ಲಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಎಲ್ ಅಂಡ್ ಟಿ ಕಂಪನಿಯವರು ತಾಂತ್ರಿಕ ರೂಪುರೇಷೆ ಇಲ್ಲದೇ ರಸ್ತೆ ಅಗೆದು ಹಾಕಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ರಸ್ತೆಯ ದುರವಸ್ಥೆಯಿಂದಾಗಿ ಪದೇಪದೆ ಅಪಘಾತಗಳು ಸಂವಿಸಿ ಸಾವು ನೋವುಗಳು ಹೆಚ್ಚಾಗಿವೆ. ಅವೈಜ್ಞಾನಿಕವಾಗಿ ಮಣ್ಣು ಅಗೆದ ಪರಿಣಾಮ ಗುಡ್ಡಕುಸಿತ ಹಾಗೂ ರಸ್ತೆಯ ಅಂಚಿನಲ್ಲಿರುವ ಮರಗಳು ರಸ್ತೆಗೆ ಉರುಳಿ ಬಿದ್ದು ಅರಣ್ಯನಾಶವಾಗುತ್ತಿದೆ.
ಮನವಿಯಲ್ಲಿ ಹೋರಾಟ ಸಮಿತಿಯ ಜೊತೆಗೆ ನೆಲ್ಯಾಡಿ ಪರಿಸರದ ಎಲ್ಲಾ ಶಾಲಾ-ಕಾಲೇಜು, ಸಂಘ ಸಂಸ್ಥೆಗಳು ಸೇರಿದಂತೆ ಸುಮಾರು ನಲ್ವತ್ತು ಸಂಘಟನೆಗಳ ಹೆಸರು ನಮೂದಿಸಿ ನೀಡಲಾಗಿದೆ. ಜಿಲ್ಲಾಧಿಕಾರಿಗಳಿಗೆ ಮತ್ತು ಪೊಲೀಸ್ ಅಧೀಕ್ಷಕರಿಗೆ ಮನವಿ ನೀಡುವ ಸಂದರ್ಭದಲ್ಲಿ ಹೋರಾಟ ಸಮಿತಿ ಕಾರ್ಯದರ್ಶಿ ಜೋಸ್ ಕೆಜೆ, ಪದಾಧಿಕಾರಿಗಳಾದ ಫಾ.ಆದರ್ಶ್ ಜೋಸೆಫ್, ಸೆಬಾಸ್ಟಿಯನ್ ಕೆ ಕೆ, ಜಯಾನಂದ ಬಂಟ್ರಿಯಾಲ್, ನೆಲ್ಯಾಡಿ ವರ್ತಕ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ., ಮನೋಜ್, ಜಯೇಶ್ ವಿಜೆ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.