ಮಂಗಳೂರು: ಎಪಿಎಂಸಿಯಲ್ಲಿ ಆ.1 ರಿಂದ ಬರುವ ಮೂರು ತಿಂಗಳುಗಳ ಕಾಲ ಬಾಡಿಗೆ ಶುಲ್ಕ ಕಡ್ಡಾಯ ಮಾಡಲಾಗಿದ್ದು, ಎಪಿಎಂಸಿ ವ್ಯಾಪಾರಸ್ಥರಿಗೆ ತಿಂಗಳಿಗೆ 15,650 ರೂ. ದರ ಬಾಡಿಗೆ ನಿಗದಿಗೊಳಿಸಿ ಎಪಿಎಂಸಿ ಹಾಗೂ ವರ್ತಕರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಎಪಿಎಂಸಿ ವ್ಯಾಪಾರಸ್ಥರಿಗೆ ತಿಂಗಳಿಗೆ 15,650 ರೂ. ದರ ಬಾಡಿಗೆ ನಿಗದಿ ಮಾಡಲಾಗಿದೆ. ಎಪಿಎಂಸಿಯ ಎಲ್ಲಾ ಖರ್ಚುವೆಚ್ಚಗಳು ಹೆಚ್ಚಾಗುತ್ತಿರುವುದರಿಂದ ಪ್ರಸ್ತುತ ವ್ಯಾಪಾರ ನಡೆಸುವ ವ್ಯಾಪಾರಸ್ಥರು ತಾವು ನಡೆಸುವ ವ್ಯಾಪಾರದ ಜಾಗದ ಸರಿಯಾದ ಬಾಡಿಗೆಯ ದರವನ್ನು ನೀಡುವ ಕುರಿತಂತೆ ಹಾಗು ಎಪಿಎಂಸಿಯ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸುವ ಸಲುವಾಗಿ ಎಪಿಎಂಸಿ ಹಾಗೂ ವರ್ತಕರ ಸಭೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಡಾ.ವೈ ಭರತ್ ಶೆಟ್ಟಿ ಹಾಗೂ ಎಪಿಎಂಸಿ ಅಧ್ಯಕ್ಷ ಕೃಷ್ಣರಾಜ್ ಹೆಗ್ಡೆ ಅವರ ನೇತೃತ್ವದಲ್ಲಿ ಜರುಗಿತು.
ಈ ವೇಳೆ ಶಾಸಕ ಡಾ. ವೈ ಭರತ್ ಶೆಟ್ಟಿ ಮಾತನಾಡಿ, ಮಂಗಳೂರಿನ ಸೆ೦ಟ್ರಲ್ ಮಾರ್ಕೆಟ್ನಲ್ಲಿ ವ್ಯಾಪಾರಸ್ಥರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸ್ಥಳಾಂತರದಿಂದ ಎಪಿಎಂಸಿಯು ವ್ಯಾಪಾರಸ್ಥರಿಗೆ ಬೇಕಾದ ಮೂಲಭೂತ ಸೌಕರ್ಯವನ್ನು ನೀಡಲು ಸದಾ ಸಿದ್ಧವಾಗಿದೆ. ಅಲ್ಲದೇ ಪ್ರಸ್ತುತ ಪರಿಸ್ಥಿತಿಯು ಕ್ಲಿಷ್ಟಕರವಾಗಿರುವುದರಿಂದ ವ್ಯಾಪಾರದಲ್ಲಿ ನಷ್ಟ ಸಹಜವಾಗಿದೆ. ಎಪಿಎಂಸಿಯಲ್ಲಿ ಹಣ್ಣು, ತರಕಾರಿ ಹೂ ವ್ಯಾಪಾರಸ್ಥರಿಗೆ ಬೇಕಾದ ಸಕಲ ವ್ಯವಸ್ಥೆಯನ್ನು ಮಾಡಲಾಗುವುದು. ಎಪಿಎಂಸಿಯನ್ನು ಹೈಟೆಕ್ ಆಗಿ ರೂಪಿಸುವುದು ನಮ್ಮ ಧ್ಯೇಯವಾಗಿದೆ. ಜನರಿಗೂ ಸುಲಭ ವ್ಯವಸ್ಥೆಯಾಗಬೇಕು ಹಾಗೂ ವ್ಯಾಪಾರಿಗಳಿಗೂ ಕೂಡಾ ಲಾಭವಾಗಬೇಕು. ಮೂರು ತಿಂಗಳ ನಂತರ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.
ಎಪಿಎಂಸಿ ಅಧ್ಯಕ್ಷ ಕೆ ಕೃಷ್ಣರಾಜ್ ಹೆಗ್ಡೆ ಮಾತನಾಡಿ, ವ್ಯಾಪಾರಿಗಳ ದೂರಿನಂತೆ ಮಳೆಗಾಲದಲ್ಲಿ ಅಲ್ಲಲ್ಲಿ ಕೆಸರು ನಿಂತು ನಡೆದಾಡಲು ಕೂಡಾ ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಬಂದಿವೆ. ನಮ್ಮ ವತಿಯಿಂದ ರಸ್ತೆಗೆ ಜಲ್ಲಿ ಕಾ೦ಕ್ರೀಟ್ ಮಿಕ್ಸ್ ಮಾಡಿ ಹಾಕಲಾಗಿದೆ. ಎಪಿಎಂಸಿಗೆ ನೀರಿನ ಸಮಸ್ಯೆ ಇರುವುದರಿಂದ ಪ್ರಸ್ತುತ ಕಾರ್ಪೊರೇಶನ್ ವತಿಯಿಂದ ನೀರು ಬಿಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಅದಕ್ಕೆ ಬೇಕಾದ ಸಂಪುಗಳನ್ನು ಮಾಡಲಾಗುತ್ತದೆ ಎಂದರು.
ಸಭೆಯಲ್ಲಿ ಎಪಿಎಂಸಿ ವತಿಯಿಂದ ನಿಗದಿ ಮಾಡಿದ ಬಾಡಿಗೆ ದರವನ್ನು ವ್ಯಾಪಾರಸ್ಥರು ನೀಡುವುದಾಗಿ ಒಪ್ಪಲಾಯಿತು. ಈ ಸಂದರ್ಭದಲ್ಲಿ ಎಪಿಎಂಸಿ ಉಪಾಧ್ಯಕ್ಷೆ ರಜನಿ ದುಗ್ಗಣ್ಣ, ಎಪಿಎಂಸಿ ಸದಸ್ಯರುಗಳಾದ ರಾಘವ ಶೆಟ್ಟಿ, ರುಕ್ಮಯ್ಯ ನಾಯಕ್, ವ್ಯಾಪಾರಸ್ಥರು ಸೇರಿದಂತೆ ಇತರರಿದ್ದರು.