ಮಂಗಳೂರು: ಉಕ್ರೇನ್ನಿಂದ ಏರ್ ಲಿಫ್ಟ್ ಆದ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ವಿದ್ಯಾರ್ಥಿನಿ ಅನುಷಾ ಭಟ್ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಅವರನ್ನು ಪೋಷಕರು ಸೇರಿದಂತೆ ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್ ಸ್ವಾಗತಿಸಿದರು.
ಮಂಗಳೂರಿನ ಬಿಜೈ ನ್ಯೂ ರೋಡ್ ನಿವಾಸಿ ಅನುಷಾ ಭಟ್ ರೊಮೇನಿಯಾದಿಂದ ಮುಂಬೈಗೆ ಆಗಮಿಸಿ ಮಂಗಳೂರು ಏರ್ ಪೋರ್ಟ್ ಗೆ ಆಗಮಿಸಿದ್ದಾರೆ. ಇವರು ಉಕ್ರೇನ್ನ ವಿನ್ನೆಸ್ಟ್ಯಿಯಾ ನಗರದ ನ್ಯಾಷನಲ್ ಕಾಲೇಜಿನಲ್ಲಿ ಎಂಬಿಬಿಎಸ್ ಶಿಕ್ಷಣ ಪಡಿಯುತ್ತಿದ್ದರು. ಯುದ್ಧವಾಗುತ್ತಿದ್ದ ಪ್ರದೇಶದಿಂದ ಸುಮಾರು 200 ಕಿ.ಮೀ. ದೂರದಲ್ಲಿದ್ದರು ಅನುಷಾ ಭಟ್.
ನಗರಕ್ಕೆ ಬಂದ ಪುತ್ರಿಯನ್ನು ಕಂಡು ಪೋಷಕರು ಸಂತಸಪಟ್ಟರು. ಅಲ್ಲದೆ ಪುತ್ರಿಯನ್ನು ಏರ್ ಲಿಫ್ಟ್ ಮಾಡಿ ಮಂಗಳೂರಿಗೆ ಸುರಕ್ಷಿತವಾಗಿ ಕರೆ ತಂದಿರುವುದಕ್ಕೆ ಅನುಷಾ ಪೋಷಕರಿಂದ ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದರು.
ಉಕ್ರೇನ್ನಿಂದ ಏರ್ ಲಿಫ್ಟ್ ಆದ ಮಂಗಳೂರಿನ ಮೊದಲ ವಿದ್ಯಾರ್ಥಿನಿ ಅನುಷಾ ಭಟ್ ಇದನ್ನೂ ಓದಿ: ಬಿಜೆಪಿ ನಾಯಕ ವೀರಯ್ಯ ಪುತ್ರನಿಂದ ವಂಚನೆ ಆರೋಪ: ಸಿಎಂಗೆ ದೂರು
ವಿದ್ಯಾರ್ಥಿನಿ ಅನುಷಾ ಭಟ್ ಮಾತನಾಡಿ, ಬಸ್ ಬುಕ್ ಮಾಡಿ ಉಕ್ರೇನ್ ಬಾರ್ಡರ್ ಬಳಿಗೆ ಬಂದಿದ್ದೆವು. ಅಲ್ಲಿಂದ 2ಕಿ.ಮೀ. ನಡೆದುಕೊಂಡು ಬಂದು ಬಾರ್ಡರ್ ತಲುಪಿದ್ದೆವು. ಫೆ.27ರಂದು ಬೆಳಗ್ಗೆ ನಾವು ತಲುಪಿದ್ದೇವೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿದ ಬಳಿಕ ನಾವು ಗೊಂದಲಕ್ಕೊಳಗಾಗಿದ್ದೆವು. ಅಲ್ಲದೆ, ನಮಗೆ ಸ್ಟೆಪ್ 1 ಪರೀಕ್ಷೆಯಿದ್ದ ಕಾರಣ ಏನು ಮಾಡಬೇಕೆಂದು ಗೊತ್ತಾಗಿಲ್ಲ ಎಂದು ಹೇಳಿದರು.
ನಾವಿರುವ ಕಡೆಯಲ್ಲಿ ಯಾವುದೇ ದಾಳಿ ನಡೆದಿರಲಿಲ್ಲ. ಮನೆಯವರೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೆ. ಕರೆ ಮಾಡುವುದಕ್ಕೆ ಯಾವುದೇ ತೊಡಕಾಗಿರಲಿಲ್ಲ. ಭಾರತ ಸರ್ಕಾರ ನಮಗೆ ಏರ್ ಲಿಫ್ಟ್ ಮಾಡಲು ಬಹಳ ಸಹಕಾರ ನೀಡಿದೆ. ಬುಕರೆಸ್ಟ್ನಿಂದ ಮಂಗಳೂರಿಗೆ ಬಂದು ತಲುಪುವವರೆಗೂ ಸರ್ಕಾರದ ಪ್ರತಿನಿಧಿಗಳು ನಿರಂತರ ಸಂಪರ್ಕದಲ್ಲಿದ್ದರು. ನಾನು ಬಂದಿರುವ ಫ್ಲೈಟ್ ನಲ್ಲಿ ಎಲ್ಲರೂ ಭಾರತೀಯರೇ ಇದ್ದರು. ಎಲ್ಲರೂ ಸೇಫಾಗಿ ಬಂದು ತಲುಪಿದ್ದಾರೆ. ನನ್ನ ಕಾಲೇಜಿನಲ್ಲಿ ಒಬ್ಬಳು ವಿದ್ಯಾರ್ಥಿನಿ ಮಂಗಳೂರಿನಲ್ಲಿದ್ದಳು. ಅವಳು ಇನ್ನಷ್ಟೇ ಏರ್ ಲಿಫ್ಟ್ ಆಗಬೇಕು ಎಂದು ಹೇಳಿದರು.