ಕರ್ನಾಟಕ

karnataka

ETV Bharat / state

ಕೃಷಿ ಕಾನೂನು ವಿರುದ್ಧದ ಪ್ರತಿಭಟನೆಯಲ್ಲಿ ರಾಷ್ಟ್ರ ವಿರೋಧಿ ಶಕ್ತಿಗಳು ಕೈಜೋಡಿಸಿವೆ : ಕ್ಯಾ.ಗಣೇಶ್ ಕಾರ್ಣಿಕ್ ಆರೋಪ - Ganesh Karnik

ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವರಿಗೆ ತಾವು ಯಾವ ವಿಷಯದ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದೇವೆ ಎಂಬುದು ತಿಳಿದಿಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದ್ದಾರೆ.

Ganesh Karnik
ಗಣೇಶ್ ಕಾರ್ಣಿಕ್

By

Published : Jan 9, 2021, 4:24 PM IST

ಮಂಗಳೂರು: ದೆಹಲಿಯಲ್ಲಿ ಕೃಷಿ ಮಸೂದೆ ವಿರೋಧಿಸಿ ಮಾಡುತ್ತಿರುವ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಹಿಡಿದಿರುವ ಫ್ಲಕ್ ಕಾರ್ಡ್ ನೋಡಿದಾಗ ಈ ಪ್ರತಿಭಟನೆಯ ಹಿಂದೆ ವ್ಯವಸ್ಥಿತವಾದ ಸಂಚು ಇದೆ ಎಂದು ಕಂಡು ಬರುತ್ತಿದೆ. ಇದರೊಂದಿಗೆ ರಾಷ್ಟ್ರ ವಿರೋಧಿ ಶಕ್ತಿಗಳು ಕೈಜೋಡಿಸಿವೆ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್ ಆರೋಪಿಸಿದ್ದಾರೆ.

ಬಿಜೆಪಿ ರಾಜ್ಯ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಭಟನಾನಿರತರು ದೇಶ ವಿರೋಧಿ ಕೃತ್ಯಗಳಲ್ಲಿ ಆರೋಪಿಗಳಾಗಿ ಬಂಧಿತರಾದವರನ್ನು ಬಿಡುಗಡೆ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಇದು ಮೋದಿಯವರ ಒಳ್ಳೆಯ ಆಡಳಿತ ಇದೇ ರೀತಿ ಮುಂದುವರಿದಲ್ಲಿ ತಮಗೆ ಉಳಿಗಾಲವಿಲ್ಲ ಎಂದು ಪ್ರತಿಭಟನೆ ನಡೆಯುತ್ತಿದೆಯೇ ಹೊರತು ರೈತರ ಪರವಾದ ಹೋರಾಟವಲ್ಲ ಎಂದು ಹೇಳಿದರು.

ಪ್ರತಿಭಟನೆಯು ದೆಹಲಿ ಹತ್ತಿರದ ಮೂರು ರಾಜ್ಯಗಳ ಹೊರತು ದೇಶದ ಬೇರೆಲ್ಲಿಯೂ ಪ್ರತಿಭಟನೆಯ ಕಾವು ಏರಿಲ್ಲ‌. ಈ ಬಗ್ಗೆ ಏನೇ ಮನವೊಲಿಕೆ ಮಾಡಿದರೂ, ಮೂರು ಮಸೂದೆ ವಾಪಸ್ ತೆಗೆದುಕೊಳ್ಳಿ ಎಂಬ ಬೇಡಿಕೆಯನ್ನು ಮಾತ್ರ ಮುಂದೆ ಇಡುತ್ತಿದ್ದಾರೆ. ಪ್ರತಿಭಟನೆ ಮಾಡುತ್ತಿರುವವರಿಗೆ ತಾವು ಯಾವ ವಿಷಯದ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದೇವೆ ಎಂಬುದು ತಿಳಿದಿಲ್ಲ ಎಂದರು.

ಸರ್ಕಾರ ಆರನೇ ಸುತ್ತಿನ ಮಾತುಕತೆ ಮಾಡುವವರೆಗೂ ಯಾವುದೇ ಕಾರಣಕ್ಕೂ ಎಂಎಸ್​ಬಿ ಹಿಂತೆಗೆದುಕೊಳ್ಳುವುದಿಲ್ಲ, ಆಯಾ ರಾಜ್ಯಗಳಲ್ಲಿ ಎಪಿಎಂಸಿ ಕಾಯ್ದೆ ರದ್ದಾಗುವುದಿಲ್ಲ ಎಂದು ಲಿಖಿತರೂಪದಲ್ಲಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಈ ಕಾಯ್ದೆ ಅನುಷ್ಠಾನ ಗೊಂಡ ಬಳಿಕ 22 ಬೇರೆ ಬೇರೆ ಬೆಳೆಗಳಿಗೆ ಸರ್ಕಾರ ಶೇ 23-45ರಷ್ಟು ಬೆಂಬಲ ಬೆಲೆ ನೀಡುತ್ತೇವೆ ಎಂದರೂ ಅವರು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದರು.

ಯಾವ ಬಿಲ್​ಗಾಗಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೋ, ಕರ್ನಾಟಕದಲ್ಲಿ 2007ರ ಬಳಿಕ ಎಪಿಎಂಸಿ ಹೊರತುಪಡಿಸಿ ಹೊರಗೆ ಹೋಗಿ ಮಾರಾಟ ಮಾಡಲು ಯಾವುದೇ ತೊಂದರೆಯಿಲ್ಲ. ಈ ಪ್ರತಿಭಟನೆಗೆ ಸಹಕಾರ ನೀಡುತ್ತಿರುವ ಕಮ್ಯುನಿಸ್ಟ್ ಆಡಳಿತದ ಕೇರಳದಲ್ಲಿ ಎಪಿಎಂಸಿ ಕಾಯ್ದೆಯೇ ಇಲ್ಲ ಎಂದರು.

ಜ.11-13 ರವರೆಗೆ ಜನಸೇವಕ ಸಮಾವೇಶ:

ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕ ರಾಜ್ಯದ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ಸ್ಥಾನ ಗಳಿಸಿ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಮುಂದಿನ ತಾಪಂ ಮತ್ತು ಜಿಪಂ ಚುನಾವಣೆ ಗಮನದಲ್ಲಿಟ್ಟುಕೊಂಡು ಹಾಗೂ ಗ್ರಾಪಂ ಚುನಾಯಿತ ಅಭ್ಯರ್ಥಿಗಳನ್ನು ಸನ್ಮಾನಿಸುವ ಉದ್ದೇಶದಿಂದ ಮತ್ತೊಮ್ಮೆ ಜನಸೇವಕ ಸಮಾವೇಶ ಎನ್ನುವ ಕಾರ್ಯಕ್ರಮವನ್ನು ಜಿಲ್ಲೆಯ ಆಯ್ದ ಕ್ಷೇತ್ರಗಳಲ್ಲಿ ಜ.11-13 ರವರೆಗೆ ಆಯೋಜಿಸಲಾಗಿದೆ.

ಜನಸೇವಕ ಸಮಾವೇಶಕ್ಕೆ ರಾಜ್ಯ ಹಾಗೂ ಕೇಂದ್ರದ ನಾಯಕರ ಒಟ್ಟು ಐದು ತಂಡಗಳು ಪ್ರವಾಸಕೈಗೊಳ್ಳಲಿದೆ. ಪ್ರಧಾನಿ ಮೋದಿ ಅವರು ತನ್ನನ್ನು ದೇಶದ ಪ್ರಧಾನ ಸೇವಕ ಎಂದು ಕರೆಸಿಕೊಂಡಿದ್ದಾರೆ. ಈ ಕಲ್ಪನೆಯನ್ನು ಇಟ್ಟುಕೊಂಡು ಚುನಾಯಿತ ಪ್ರತಿನಿಧಿಗಳು ಕೂಡಾ ಅದೇ ಸಂದೇಶದೊಂದಿಗೆ ಗ್ರಾಮ ಮಟ್ಟದಲ್ಲಿ ಸೇವಕರಾಗಿ ಕೆಲಸ ಮಾಡುವ ಕಲ್ಪನೆಯನ್ನು ಮೂಡಿಸುವ ಸಲುವಾಗಿ ಈ ಕಲ್ಪನೆಗೆ 'ಜನಸೇವಕ ಸಮಾವೇಶ' ಎಂದು ಹೆಸರಿಡಲಾಗಿದೆ ಎಂದರು.

ಮೈಸೂರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಈ ಜನಸೇವಕ ಸಮಾವೇಶದ ಉದ್ಘಾಟನೆ ನಡೆಯಲಿದೆ. ಆ ಬಳಿಕ ಜ.11 ರಂದು ಮಡಿಕೇರಿಯಲ್ಲಿ ಬೆಳಗ್ಗೆ 11 ಗಂಟೆಗೆ, ಮಧ್ಯಾಹ್ನ 3ಗಂಟೆಗೆ ಬಂಟ್ವಾಳದಲ್ಲಿ, ಜ.12 ರಂದು ಬೆಳಗ್ಗೆ 11ಗಂಟೆಗೆ, ಮಧ್ಯಾಹ್ನ 3ಕ್ಕೆ ಉತ್ತರ ಕನ್ನಡದಲ್ಲಿ, ಜ.13ರಂದು ಬೆಳಗ್ಗೆ 11ಕ್ಕೆ ಶಿವಮೊಗ್ಗದಲ್ಲಿ ಹಾಗೂ ಮಧ್ಯಾಹ್ನ 3ಕ್ಕೆ ಚಿಕ್ಕಮಗಳೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ABOUT THE AUTHOR

...view details