ಮಂಗಳೂರು: ದುಬೈನಿಂದ ಅನಿವಾಸಿ ಭಾರತೀಯರನ್ನು ಹೊತ್ತು ಎರಡನೇ ವಿಮಾನ ಸೋಮವಾರ (ಮೇ.18) ರಂದು ಮಂಗಳೂರು ತಲುಪಲಿದೆ.
ಮೇ 18ರಂದು ದುಬೈ ವಿಮಾನ ನಿಲ್ದಾಣದಿಂದ ಹೊರಡಲಿರುವ ಈ ವಿಮಾನದಲ್ಲಿ 176 ಪ್ರಯಾಣಿಕರಿರಲಿದ್ದಾರೆ ಎಂದು ತಿಳಿದುಬಂದಿದೆ. ದುಬೈನಿಂದ ಮಧ್ಯಾಹ್ನ ಹೊರಡಲಿರುವ ಏರ್ ಇಂಡಿಯಾ ವಿಮಾನ ಸಂಜೆಯ ವೇಳೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದೆ.
ಮೇ 12 ರಂದು ಮೊದಲ ವಿಮಾನ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿತ್ತು. ಈ ವಿಮಾನದಲ್ಲಿ 176 ಪ್ರಯಾಣಿಕರು ಇದ್ದರು. ಈ ವಿಮಾನದಲ್ಲಿ ಬಂದ ದಕ್ಷಿಣ ಕನ್ನಡ ಜಿಲ್ಲೆಯ 15 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇದರಿಂದಾಗಿ ಮಂಗಳೂರಿಗೆ ಬರುತ್ತಿರುವ ಎರಡನೇ ವಿಮಾನ ಆತಂಕಕ್ಕೆ ಕಾರಣವಾಗಿದೆ.
ಮೇ 12 ರಂದು ದುಬೈ ವಿಮಾನ ಮಂಗಳೂರಿಗೆ ಬಂದ ವೇಳೆ ಪ್ರಯಾಣಿಕರ ಸೇವೆ ಮತ್ತು ಅವರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡುವ ಬಗ್ಗೆ ಲೋಪವುಂಟಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರಿಗೆ ಮುಂದೆ ವಿಮಾನ ನಿಲ್ದಾಣದಲ್ಲಿ ನೀಡುವ ಸೇವೆಯಲ್ಲಿ ಸಮಸ್ಯೆ ಆಗದಂತೆ ದ.ಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಪತ್ರ ಬರೆದಿದ್ದರು.
ಅದೇ ರೀತಿಯಲ್ಲಿ ವಿಮಾನ ಪ್ರಯಾಣಿಕರ ತಪಾಸಣೆ ಮತ್ತು ಕ್ವಾರಂಟೈನ್ ವ್ಯವಸ್ಥೆ ಮಾಡುವ ಪ್ರಕ್ರಿಯೆಗೆ ಸಾಕಷ್ಟು ಸಮಯಾವಕಾಶ ಬೇಕಾಗಿದ್ದು, ಪ್ರಯಾಣಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ವಿನಂತಿ ಮಾಡಿದ್ದಾರೆ.