ಮಂಗಳೂರು: ದ.ಕ.ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ವಿಟ್ಲ ಕಸಬ ಗ್ರಾಮದ ಕಡಂಬು ನೆತ್ತರಕೆರೆ ನಿವಾಸಿ ಜಮಾಲುದ್ದೀನ್ ಅಲಿಯಾಸ್ ಜಮಾಲ್ (36) ಬಂಧಿತ ಆರೋಪಿ.
ಪ್ರಕರಣದ ಹಿನ್ನೆಲೆ:
ಜನವರಿ 7 ರಂದು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ನಿವಾಸಿ ದಿಲೀಪ್ ಟಿ. ಎಂಬುವವರಿಗೆ ಯುವತಿಯೋರ್ವಳು ಕರೆ ಮಾಡಿದ ಕಾರಣ ಅವರು ತಮ್ಮ ಸ್ನೇಹಿತರಾದ ಜನಾರ್ದನ್, ಪ್ರಶಾಂತ್, ಪ್ರವೀಣ್ ಎಂಬವರೊಂದಿಗೆ ಪುತ್ತೂರು ಬೈಪಾಸ್ ರಸ್ತೆಗೆ ಬಂದಿದ್ದರು. ಈ ಸಂದರ್ಭ ಆ ಯುವತಿ ಅವರನ್ನು ಅಲ್ಲಿಯೇ ಹತ್ತಿರದಲ್ಲಿರುವ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ಮತ್ತೋರ್ವಳು ಯುವತಿಯಿದ್ದಳು. ಇದೇ ವೇಳೆ ಏಕಾಏಕಿ ಇಬ್ಬರು ಗಂಡಸರು ದಾಳಿ ನಡೆಸಿ, ದಿಲೀಪ್ ಹಾಗೂ ಸ್ನೇಹಿತರಿಗೆ ಹಲ್ಲೆ ಮಾಡಿದ್ದಾರೆ. ಆ ಬಳಿಕ ಕೋಣೆಯೊಂದರಲ್ಲಿ ಬಂಧನದಲ್ಲಿರಿಸಿದ್ದರು. ಬಳಿಕ ಯುವತಿಯರೊಂದಿಗೆ ಫೋಟೋ ತೆಗಿಸಿ ಇದನ್ನು ಪೊಲೀಸರಿಗೆ ಹಾಗೂ ಟಿವಿ ಚಾನಲ್ನವರಿಗೆ ತಿಳಿಸುವುದಾಗಿ ಬೆದರಿಸಿದ್ದಾರೆ. ಈ ವೇಳೆ ಪೊಲೀಸರು ಎಂಬುದಾಗಿ ಹೇಳಿಕೊಂಡು ಬಂದ ಮೂವರು 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಇಲ್ಲವಾದಲ್ಲಿ ತೆಗೆದ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದಾರೆ. ಈ ಸಂದರ್ಭ ಹನಿಟ್ರ್ಯಾಪ್ಗೊಳಗಾದವರು ಅಷ್ಟೊಂದು ಹಣ ಇಲ್ಲವೆಂದು ಹೇಳಿದಾಗ ಅವರಲ್ಲಿರುವ ಮೊಬೈಲ್, ನಗದು ಹಾಗೂ ಕಾರಿನ ಕೀ ಮತ್ತು ಕಾರಿನ ದಾಖಲಾತಿಯನ್ನು ಕಿತ್ತುಕೊಂಡು, ಪೇಪರ್ ಒಂದರಲ್ಲಿ ಸಹಿ ಮತ್ತು ಬೆರಳಚ್ಚು ತೆಗೆಕೊಂಡಿದ್ದಾರೆ.
ಮರುದಿನ ಪೊಲೀಸ್ ಎಂದು ಹೇಳಿಕೊಂಡಿದ್ದಾತ ಬಂದು ಠಾಣೆಗೆ ಕರೆದೊಯ್ಯಲಾಗುವುದು ಎಂದು ಹೇಳಿ ಅವರನ್ನು ರೆಸಾರ್ಟ್ಗೆ ಕರೆದುಕೊಂಡು ಹೋಗಿ ಅಕ್ರಮ ಬಂಧನದಲ್ಲಿರಿಸಿದ್ದಾರೆ. ವಿಷಯ ತಿಳಿದು ಪೊಲೀಸರು ರೆಸಾರ್ಟ್ ಮೇಲೆ ದಾಳಿ ನಡೆಸಿದಾಗ ಆರೋಪಿಗಳೆಲ್ಲರೂ ಪರಾರಿಯಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಲೋಹಿತ್ ಬಿ.ಬಿ ಮತ್ತು ಮಹಮ್ಮದ್ ಶರೀಫ್ ಎಂಬುವವರನ್ನು ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಮತ್ತಿಬ್ಬರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.