ಮಂಗಳೂರು: ನಗರದ ಹೊರವಲಯದ ಬಜ್ಪೆಯಲ್ಲಿ ಇಬ್ಬರು ಯುವಕರ ಮೇಲೆ ತಂಡವೊಂದು ದಾಳಿ ಮಾಡಿ ಒಬ್ಬನಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ 4ಕ್ಕೆ ಏರಿದೆ.
ಕೈಕಂಬದ ಪುನೀತ್ ಬಂಧಿತ ಆರೋಪಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಾದ ಬಜ್ಪೆ ಕಳವಾರು ನಿವಾಸಿ ಪ್ರಶಾಂತ್ ಯಾನೆ ಪಚ್ಚು, ಧನರಾಜ್, ಯಜ್ಞೆಶ್ ಎಂಬುವರನ್ನು ಈ ಹಿಂದೆ ಬಂಧಿಸಲಾಗಿತ್ತು. ಕರಂಬಾರು ಶಾಂತಿಗುಡ್ಡೆ ನಿವಾಸಿ ಅಬ್ದುಲ್ ಸಫ್ವಾನ್ ಇರಿತಕ್ಕೆ ಒಳಗಾಗಿ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಬ್ದುಲ್ ಸಫ್ವಾನ್ ಮತ್ತು ಸ್ನೇಹಿತ ಮುಹಮ್ಮದ್ ಸಫ್ವಾನ್ ಎಂಬವರು ಕರಂಬಾರಿನಿಂದ ಬಜ್ಪೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಬಸ್ತಿ ಬಳಿ ಅಡ್ಡಗಟ್ಟಿದ ತಂಡ ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಚೂರಿಯಿಂದ ಹಲ್ಲೆ ನಡೆಸಿದ್ದರು.
ಬಜಪೆ ಪೊರ್ಕೊಡಿಯಲ್ಲಿ ಚಿನ್ನಾಭರಣ ಕಳವು ಪ್ರಕರಣ-ಆರೋಪಿ ಬಂಧನ:ಮಂಗಳೂರು ತಾಲೂಕಿನ ಬಜಪೆ ಗ್ರಾಮದ ಪೊರ್ಕೋಡಿ ದೇವಸ್ಥಾನದ ಕಡೆಗೆ ಹೋಗುವ ರಸ್ತೆಯಲ್ಲಿ ಕರೋಡಿ ಎಂಬಲ್ಲಿ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಆರೋಪಿಯನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಬಜಪೆಯ ತಾರೀಕಂಬ್ಳ ನಿವಾಸಿ ವಿನ್ಸೆಂಟ್ ಡಿಸೋಜಾ ಬಂಧಿತ ಆರೋಪಿ. ಸೆಪ್ಟೆಂಬರ್ 1 ರಂದು ಕರೋಡಿಯ ಮನೆಯ ಬೆಡ್ ರೂಮಿನಲ್ಲಿದ್ದ ಕಬ್ಬಿಣದ ಕಪಾಟಿನ ಮಿನಿಲಾಕರ್ನ್ನು ಮುರಿದು ಸುಮಾರು ಐದು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಕಳವಾಗಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಜಪೆ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ಅವರ ತಂಡ ಬಂಧಿಸಿದೆ.