ಬಂಟ್ವಾಳ(ದಕ್ಷಿಣ ಕನ್ನಡ):ಮುಂದಿನ 2024ರ ಲೋಕಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷದವರು ಕರ್ನಾಟಕವನ್ನು ತನ್ನ ಎಟಿಎಂ ಮಾಡಿಕೊಳ್ಳಲು ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಗೆಲುವಿಗಾಗಿ ಯತ್ನಿಸುತ್ತಿದೆ. ಅಧಿಕಾರಕ್ಕೇನಾದರೂ ಬಂದರೆ ವರ್ಷಕ್ಕೆ ಹತ್ತು ಸಾವಿರ ಕೋಟಿ ಲೂಟಿ ಮಾಡಬಹುದು ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಆರೋಪಿಸಿದ್ದಾರೆ.
ಜನವರಿ 14ರಂದು ಪೊಳಲಿಯಿಂದ ಆರಂಭಗೊಂಡ ಬಂಟ್ವಾಳ ಬಿಜೆಪಿ ನೇತೃತ್ವದಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರ ಪಾದಯಾತ್ರೆ ಗ್ರಾಮವಿಕಾಸ ಯಾತ್ರೆಯ ಸಮಾರೋಪ ಸಮಾರಂಭವನ್ನು ಬಂಟ್ವಾಳ ಬಸ್ತಿಪಡ್ಪುವಿನ ಮೈದಾನದಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಅಣ್ಣಾಮಲೈ, ಕಾಂಗ್ರೆಸ್ ಬ್ರಿಟಿಷ್ ರಾಜ್ನ ಒಡೆದು ಆಳುವ ನೀತಿಯ ಮುಂದುವರಿದ ಭಾಗವಾಗಿದೆ. ಅದರೊಂದಿಗೆ ಅಗೋಚರವಾಗಿ ಕೊಮುಹಿಂಸೆ ಪ್ರಚೋದಕ ಅಜೆಂಡಾ ಬರುತ್ತದೆ ಎಂದು ಎಚ್ಚರಿಸಿದ ಅವರು, ಇಡೀ ಕರ್ನಾಟಕಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಮಾದರಿಯಾಗಿದೆ. ರಾಜ್ಯದಲ್ಲಿ ಉತ್ತಮ 100 ಹಳ್ಳಿಗಳನ್ನು ಗುರುತಿಸಿದರೆ ಅದರಲ್ಲಿ ಶೇ.80 ರಷ್ಟು ಹಳ್ಳಿಗಳು ಕರಾವಳಿ ಕರ್ನಾಟಕಕ್ಕೆ ಸೇರಿರುತ್ತದೆ. ಹೀಗಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನವೇ ಇಲ್ಲ ಎಂದರು.
ತಮಿಳುನಾಡಿನಲ್ಲಿ ಡಿಎಂಕೆ, ಕಾಂಗ್ರೆಸ್ ಏನೇನು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ. ಅಲ್ಲಿ ನೀಡಿದ ಘೋಷಣೆಗಳಲ್ಲಿ ಯಾವುದನ್ನೂ ಅನುಷ್ಠಾನ ಮಾಡಿಲ್ಲ. ನಾವು ಕಷ್ಟಪಟ್ಟು ದುಡಿದ ಹಣವನ್ನು ಪೋಲಾಗಲು ಬಿಡಬೇಡಿ ಎಂದು ಎಚ್ಚರಿಸಿದರು.
ಬಂಟ್ವಾಳದಲ್ಲೀಗ 2.0 ಯುಗ: ಬಂಟ್ವಾಳವಿಂದು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಹಿಂದೆ ಕೋಮುಗಲಭೆಯಿಂದ ತತ್ತರಿಸಿ ಹೋಗಿದ್ದ ಕ್ಷೇತ್ರ ಇದೀಗ ವಿಕಾಸಪಥದೆಡೆ ಸಾಗುತ್ತಿದೆ. ಬಂಟ್ವಾಳವನ್ನು 1.0 ಮತ್ತು 2.0 ಎಂಬ ಯುಗವನ್ನಾಗಿ ವಿಭಾಗಿಸಿ. ಈ ಹಿಂದೆ ಬಂಟ್ವಾಳದಲ್ಲಿ ನಿರಂತರ ಕೋಮುಹಿಂಸೆ, ಸೆಕ್ಷನ್ ಹಾಕುವ ಸನ್ನಿವೇಶವಿತ್ತು. ಶರತ್ ಮಡಿವಾಳ ಹತ್ಯೆ ಸಂದರ್ಭ ಬಂದೋಬಸ್ತ್ ಏರ್ಪಡಿಸಲು ನಾನೂ ಆಗ ಬಂದಿದ್ದೆ. ಆಗ ಜನಸಾಮಾನ್ಯರು ಇದರಿಂದ ತೊಂದರೆ ಅನುಭವಿಸಿದ್ದರು. ಆಗ ಅದು 1.0 ಯುಗವಾಗಿತ್ತು. ಈಗ ನಡೆಯುತ್ತಿರುವುದು 2.0 ಅಭಿವೃದ್ಧಿಯ ಯುಗ, ಶಾಸಕ ರಾಜೇಶ್ ನಾಯ್ಕ್ ಗ್ರಾಮವಿಕಾಸ ಯಾತ್ರೆ ಮೂಲಕ ರಿಪೋರ್ಟ್ ಕಾರ್ಡ್ ನೀಡಿದ್ದಾರೆ ಎಂದರು.
ಕಾಂಗ್ರೆಸ್ ವಿರುದ್ಧ ಸಿಟಿ ರವಿ ವಾಗ್ದಾಳಿ: ರಾಮ ಮಂದಿರ ವಿರೋಧಿಗಳು ನಕಲಿ ಹಿಂದುಗಳು.. ಕಾಂಗ್ರೆಸ್ ನಾಯಕರು ನಕಲಿ ಹಿಂದುತ್ವ ಆಚರಿಸುವವರು. ಮೋದಿ ಇಂಜೆಕ್ಷನ್ ಇಲ್ಲದಿದ್ದರೆ ಸಿದ್ದರಾಮಯ್ಯ ಅವರನ್ನು ಬಯ್ಯೋದಕ್ಕೂ ಆಗುತ್ತಿರಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.