ಮಂಗಳೂರು:ಡ್ರಗ್ಸ್ ಕನ್ನಡ ಚಿತ್ರರಂಗವನ್ನು ಕಾಡುತ್ತಿರುವ ಭೂತ. ಇದರಿಂದ ಅನೇಕರ ವ್ಯಕ್ತಿತ್ವಕ್ಕೆ ಅನಗತ್ಯ ಧಕ್ಕೆಯಾಗಿದೆ. ಅದು ದೂರವಾಗಲೆಂದೇ ಪೊಲೀಸರು ಇಷ್ಟೊಂದು ಜವಾಬ್ದಾರಿ ವಹಿಸಿಕೊಂಡಿಂದ್ದಾರೆ. ಓರ್ವ ನಾಗರಿಕಳಾಗಿ ನಾನು ಯಾವ ರೀತಿ ಸಹಕಾರ ನೀಡಿದ್ದೇನೋ, ಎಲ್ಲರೂ ಆ ಸಹಕಾರ ನೀಡಿದಾಗ ನಮ್ಮ ನಾಡಿನಿಂದ ಈ ಡ್ರಗ್ಸ್ ದಂಧೆ ನಿರ್ಮೂಲನೆಯಾಗುತ್ತದೆ ಎಂದು ನಿರೂಪಕಿ, ನಟಿ ಅನುಶ್ರೀ ಹೇಳಿದರು.
ನಗರದ ಪಣಂಬೂರು ಪೊಲೀಸ್ ಠಾಣೆಯಲ್ಲಿ ಡ್ರಗ್ಸ್ ಪ್ರಕರಣ ಸಂಬಂಧ ಸಿಸಿಬಿ ವಿಚಾರಣೆಗೆ ಹಾಜರಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅನುಶ್ರೀ, ಎಲ್ಲವೂ ಸರಿಯಾದಲ್ಲಿ ಉತ್ತಮವೇ. ಕನ್ನಡ ಚಿತ್ರರಂಗದ ಬಗ್ಗೆ ಭಾರತೀಯ ಚಲನಚಿತ್ರ ಜಗತ್ತಿನಲ್ಲಿಯೇ ಗೌರವವಿದೆ. ಆ ಗೌರವ ಉಳಿಯಬೇಕಿದ್ದರೆ ಅಕಸ್ಮಾತ್ ಡ್ರಗ್ಸ್ ಪ್ರಕರಣಗಳು ಇದ್ದಲ್ಲಿ ನಿರ್ಮೂಲನೆಯಾಗಲಿ ಎಂದು ಹೇಳಿದರು.
ಸಿಸಿಬಿ ವಿಚಾರಣೆಗೆ ಕರೆದ ಹಿನ್ನೆಲೆಯಲ್ಲಿ ನಾನು ಇಂದು ಹಾಜರಾಗಿದ್ದೇನೆ. ಏನೆಲ್ಲಾ ಪ್ರಶ್ನೆಗಳು ಕೇಳಿದ್ದಾರೋ ಅದಕ್ಕೆಲ್ಲಾ ಉತ್ತರಿಸಿದ್ದೇನೆ. ಇನ್ನು ಮುಂದೆ ಕರೆದರೂ ನಾನು ಯಾವ ಸಮಯದಲ್ಲಾದರೂ ಹಾಜರಾಗುತ್ತೇನೆ. ಕಿಶೋರ್ ಅಮನ್ ಶೆಟ್ಟಿ ಹಾಗೂ ತರುಣ್ ರಾಜ್ ಇಬ್ಬರೂ ನನಗೆ ಕೊರಿಯೋಗ್ರಾಫರ್ಗಳಾಗಿರೋದರಿಂದ ನನಗೆ ವಿಚಾರಣೆಗೆ ಹಾಜರಾಗಲು ಸಿಸಿಬಿ ನೋಟಿಸ್ ಜಾರಿ ಮಾಡಿದೆ. ಅವರು 12 ವರ್ಷಗಳ ಹಿಂದೆ ಒಂದು ಪ್ರದರ್ಶನಕ್ಕೆ ನೃತ್ಯ ನಿರ್ದೇಶನ ಮಾಡಿದ್ದರು. ಅದು ಬಿಟ್ಟು ಇತ್ತೀಚೆಗೆ ಅವರೊಂದಿಗೆ ನಾನು ಯಾವುದೇ ಸಂಪರ್ಕದಲ್ಲಿಲ್ಲ. ನಾನು ಅವರೊಂದಿಗೆ ಪಾರ್ಟಿಯಲ್ಲೂ ಭಾಗವಹಿಸಿಲ್ಲ. ಆದರೆ ಹಿಂದಿನ ಪರಿಚಯ ಇದ್ದ ಕಾರಣ ಮಾಹಿತಿಗಾಗಿ ನನಗೆ ವಿಚಾರಣೆಗೆ ಹಾಜರಾಗಲು ಹೇಳಲಾಗಿದೆ ಎಂದರು.
ಎಷ್ಟು ಪ್ರಶ್ನೆಗಳಿತ್ತು ಎನ್ನುವ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅನುಶ್ರೀ, ಎಷ್ಟು ಪ್ರಶ್ನೆಗಳು ಕೇಳಬೇಕಿತ್ತೋ ಅಷ್ಟು ಕೇಳಿದ್ದಾರೆ. ತನಿಖಾಧಿಕಾರಿಗಳು ಏನು ಕೇಳಿದ್ದಾರೋ ಅದಕ್ಕೆಲ್ಲಾ ಸರಿಯಾಗಿ ಉತ್ತರಿಸಿದ್ದೇನೆ. ಆದರೆ ಯಾವ ಪ್ರಶ್ನೆಗಳನ್ನು ನನಗೆ ಕೇಳಿದ್ದಾರೋ ಅದನ್ನು ಹೇಳಲಾಗುವುದಿಲ್ಲ. ಈಗ ಮತ್ತೆ ವಿಚಾರಣೆಗೆ ಹಾಜರಾಗಲು ಏನೂ ಹೇಳಿಲ್ಲ. ಮತ್ತೆ ವಿಚಾರಣೆಗೆ ಕರೆದಲ್ಲಿ ಖಂಡಿತಾ ಬರುತ್ತೇನೆ ಎಂದು ಹೇಳಿದರು.
ತರುಣ್ ರಾಜ್ 12 ವರ್ಷಗಳ ಹಿಂದೆ ನನಗೆ ನೃತ್ಯ ತರಬೇತಿ ಮಾಡಿದ್ದರು. ಆಗ ಏನು ಮಾಡುತ್ತಿದ್ದರು ಎಂದು ನನಗೆ ತಿಳಿದಿಲ್ಲ. ಕಿಶೋರ್ ಅಮನ್ ಶೆಟ್ಟಿಯದ್ದೊಂದು ಮಕ್ಕಳ ಡ್ಯಾನ್ಸ್ ಕ್ಲಾಸ್ ಉದ್ಘಾಟಿಸಿದ್ದೆ ವಿನಾ ಬೇರೆ ರೀತಿಯಲ್ಲಿ ಯಾವುದೇ ಪರಿಚಯವಿಲ್ಲ. ಬೆಂಗಳೂರು ಸಿಸಿಬಿಯವರು ಯಾವುದೇ ತನಿಖೆಗೆ ಕರೆದಿಲ್ಲ ಎಂದು ಅನುಶ್ರೀ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.