ಮಂಗಳೂರು:ಅಂಗವಿಕಲನಾದರೆ ಜೀವನವೇ ಮುಗಿಯಿತು ಅಂದುಕೊಳ್ಳುವವರೇ ಹೆಚ್ಚು. ಆದ್ರೆ, ಮಂಗಳೂರಿನ ಯುವಕನೊಬ್ಬ ವಿಶೇಷಚೇತನನಾದರೂ ಕೂಡಾ ಜೀವನದಲ್ಲಿ ಕುಗ್ಗದೇ ದುಡಿದು ಒಳ್ಳೆಯ ಬದುಕು ಕಟ್ಟಿಕೊಂಡಿದ್ದಾನೆ. ಬೈಕಂಪಾಡಿಯ ಪರಶುರಾಮ ಅಂಗವೈಕಲ್ಯವನ್ನೇ ಮೆಟ್ಟಿ ನಿಂತವನು. ಬಾಲ್ಯದಲ್ಲೇ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ ಈತ ಬಹುತೇಕ ಕಾರ್ಯಗಳನ್ನು ತನ್ನ ಕೈಗಳ ಸಹಾಯದಿಂದಲೇ ಮಾಡುತ್ತಾನೆ.
ಕೆಲವರು ಎಲ್ಲಾ ಅಂಗಗಳು ಸರಿಯಾಗಿದ್ದರೂ ಕೂಡಾ ಕೆಲಸ ಮಾಡಲು ಹಿಂದೇಟು ಹಾಕುತ್ತಾರೆ. ಆದ್ರೆ ಈ ವಿಶೇಷಚೇತನ ಕಷ್ಟಪಟ್ಟು ದುಡಿದು ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದಾನೆ. ಯಾರ ಮೇಲೂ ಹೊರೆಯಾಗದೇ ಸ್ವತಂತ್ರ ಬದುಕು ಕಟ್ಟಿಕೊಳ್ಳುವ ಮೂಲಕ ಇತರರಿಗೂ ಮಾದರಿಯಾಗಿದ್ದಾನೆ.
ಪರಶುರಾಮನ ತಂದೆ-ತಾಯಿಯ ಮೂಲ ವಿಜಯಪುರ. ಕುಟುಂಬ ಸದಸ್ಯರು 30 ವರ್ಷಗಳ ಹಿಂದೆಯೇ ಮಂಗಳೂರಿಗೆ ವಲಸೆ ಬಂದಿದ್ದಾರೆ. ಕುಟುಂಬ ಮಂಗಳೂರಿನಲ್ಲೇ ನೆಲೆಸಿದೆ. ಪರಶುರಾಮ ಏಳು ಮಕ್ಕಳಲ್ಲಿ ಹಿರಿಯವನು. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇರುವುದರಿಂದ ಭಿಕ್ಷಾಟನೆಯಲ್ಲಿ ತೊಡಗಿದ್ದ. ಅಂಗವೈಕಲ್ಯದಲ್ಲಿಯೇ 9ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ ಪರಶುರಾಮ ಬದುಕು ಸಾಗಿಸಲು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದಾನೆ.
ಸೆಕ್ಯೂರಿಟಿ, ಡೆಲಿವರಿ ಕೆಲಸ: ಪರಶುರಾಮ ಆರಂಭದಲ್ಲಿ ಜೀವನ ಸಾಗಿಸಲು ಭಿಕ್ಷಾಟನೆ ನಡೆಸುತ್ತಿದ್ದ. ಅದರಿಂದ ಬಂದ ಹಣವನ್ನು ಮನೆಯ ಖರ್ಚಿಗೆ ನೀಡುತ್ತಿದ್ದ. ಭಿಕ್ಷಾಟನೆ ಮಾಡುವುದನ್ನು ಬಿಟ್ಟು, ಮನೆಯೊಂದರ ಸೆಕ್ಯೂರಿಟಿ ಕೆಲಸ ಮಾಡಲು ಆರಂಭಿಸಿದ್ದಾನೆ. ನಂತರ, ಡೆಲಿವರಿ ಬಾಯ್ ಆಗಿ ಕಾಯಕ ಮಾಡುತ್ತಿದ್ದಾನೆ. ಸದ್ಯ ಎರಡೂ ಕೆಲಸಗಳನ್ನು ಮಾಡುತ್ತಿದ್ದಾನೆ. ಬೆಳಿಗ್ಗೆ ಸೆಕ್ಯೂರಿಟಿ ಹಾಗೂ ರಾತ್ರಿ ವೇಳೆ ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾನೆ.