ಕರ್ನಾಟಕ

karnataka

By ETV Bharat Karnataka Team

Published : Nov 22, 2023, 8:47 PM IST

ETV Bharat / state

ಬೆಳ್ತಂಗಡಿ: ಮನೆಗೆ ಬಂದ ಪೊಲೀಸರನ್ನು ನಕ್ಸಲರೆಂದು ಪ್ರಚಾರ ಮಾಡಿದ ವಂಚನೆ ಪ್ರಕರಣದ ಆರೋಪಿ

ವಂಚನೆ ಪ್ರಕರಣದ ಆರೋಪಿಯೊಬ್ಬ ವಿಚಾರಣೆಗೆ ಎಂದು ಮನೆಗೆ ಬಂದ ಪೊಲೀಸರನ್ನು ನಕ್ಸಲರು ಎಂದು ಪ್ರಚಾರ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.

Eಪೊಲೀಸರನ್ನು ನಕ್ಸಲರು ಎಂದು ಪ್ರಚಾರ ಮಾಡಿದ ವಂಚನೆ ಪ್ರಕರಣದ ಆರೋಪಿ
ಪೊಲೀಸರನ್ನು ನಕ್ಸಲರು ಎಂದು ಪ್ರಚಾರ ಮಾಡಿದ ವಂಚನೆ ಪ್ರಕರಣದ ಆರೋಪಿ

ಬೆಳ್ತಂಗಡಿ: ಪ್ರಕರಣವೊಂದರ ತನಿಖೆಗೆ ಮನೆಗೆ ಆಗಮಿಸಿದ ಮೂಡಬಿದರೆ ಪೊಲೀಸರನ್ನು ನಕ್ಸಲರು ಎಂದು ವಂಚನೆ ಪ್ರಕರಣದ ಆರೋಪಿ ಪ್ರಚಾರ ಮಾಡಿದ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ನಾರಾವಿಯ ಕುತ್ಲೂರು ನಿವಾಸಿ ಜೋಸಿ ಆಂಟೋನಿ ಎಂಬಾತನಿಂದ ಈ ಗೊಂದಲ ಸೃಷ್ಟಿಯಾಗಿದೆ. ಮೂಡಬಿದರೆ ಠಾಣೆಯಲ್ಲಿ ಜೋಸಿ ಅಂಟೋನಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆಗೆ ಎಂದು ಮೂಡಬಿದರೆ ಪೊಲೀಸರು ಮಂಗಳವಾರ ರಾತ್ರಿ 9.30ರ ವೇಳೆಗೆ ಜೋಸಿ ಆಂಟೋನಿ ಮನೆಗೆ ತೆರಳಿದ್ದರು‌. ಪೊಲೀಸರೆಂದು ತಿಳಿದಾಕ್ಷಣ ಆರೋಪಿ ಮನೆ ಬಾಗಿಲು ತೆರೆದಿರಲಿಲ್ಲ.

ಅಲ್ಲದೇ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ತನ್ನ ಮನೆಗೆ ನಕ್ಸಲ್ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದ. ಜತೆಗೆ ಸ್ಥಳೀಯರಲ್ಲೂ ತಮ್ಮ ಮನೆಗೆ ನಕ್ಸಲರು ಬಂದಿದ್ದಾರೆಂದು ಹೇಳಿದ್ದ. ಇದರಿಂದ ಜಾಗೃತರಾದ ವೇಣೂರು ಮತ್ತು ಬೆಳ್ತಂಗಡಿ ಪೊಲೀಸರು ಜೋಸಿ ಮನೆಗೆ ಧಾವಿಸಿದ್ದಾರೆ. ಆದರೆ ವಿಚಾರಣೆ ವೇಳೆ ಮನೆಗೆ ಬಂದಿರುವುದು ಮೂಡಬಿದರೆ ಪೊಲೀಸರು ಎಂಬ ವಿಚಾರ ಬೆಳಕಿಗೆ ಬಂದಿದೆ.

ಜೋಸಿ ಆಂಟೋನಿ ಬೆಂಗಳೂರು ನಿವಾಸಿ ಶರತ್ ಕುಮಾರ್ ಎಂಬವರಿಗೆ ಜಮೀನು ಮಾರಾಟ ಮಾಡುವ ವಿಚಾರದಲ್ಲಿ ವಂಚನೆ ಮಾಡಿದ್ದ. ಇದರ ಪ್ರಕರಣ ಮೂಡಬಿದರೆಯಲ್ಲಿ ದಾಖಲಾಗಿ ಪೊಲೀಸರು ಮನೆಗೆ ಬಂದಾಗ ಮನೆಗೆ ನಕ್ಸಲ್ ಬಂದಿದ್ದಾರೆಂದು ಸುದ್ದಿ ಹಬ್ಬಿಸಿದ್ದ.

ಈ ಬಗ್ಗೆ ಪ್ರಕಟನೆ ನೀಡಿರುವ‌ ಮಂಗಳೂರು ನಗರ ಪೊಲೀಸ್ ಕಮೀಷನರ್ಅನುಪಮ್ ಅಗರ್​ವಾಲ್ ಅವರು ದಿನಾಂಕ 17-11-2023 ರಂದು ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರು ಆಂಟೋನಿ ವಿರುದ್ಧ ದೂರು ನೀಡಿದ್ದು, ಇದಕ್ಕೆ ಸಂಬಂಧಪಟ್ಟಂತೆ ದಿನಾಂಕ 17-11-2023 ರಂದು ಜೋಸ್ಸಿ ಆಂಟೋನಿಗೆ ಫೋನ್​ ಮೂಲಕ ಸಂರ್ಪಕಿಸಲು ಪ್ರಯತ್ನಿಸಿದಾಗ ಸಂರ್ಪಕಕ್ಕೆ ಸಿಕ್ಕಿರಲಿಲ್ಲ. ನಂತರ ಅದೇ ದಿನ ಠಾಣಾ ಸಿಬ್ಬಂದಿ ದೂರುದಾರರೊಂದಿಗೆ ಬೆಳ್ತಂಗಡಿಯ ಜೋಸ್ಸಿ ಆಂಟೋನಿ ಮನೆಗೆ ನೋಟೀಸ್ ನೀಡಲು ಮಧ್ಯಾಹ್ನ ತೆರಳಿದ್ದರು. ಈ ವೇಳೆ ಆತ ಮನೆಯಲ್ಲಿ ಇರದೇ, ತಾನು ಬಳಸುವ ಮೊಬೈಲ್​ ಅನ್ನೂ ಸ್ವಿಚ್ಡ್​​ ಆಫ್ ಮಾಡಿಕೊಂಡಿದ್ದ.

ಈ ಬಗ್ಗೆ ಸ್ಥಳೀಯರಲ್ಲಿ ವಿಚಾರಿಸಿದಾಗ ಆಂಟೋನಿ ರಾತ್ರಿ 9.00 ಗಂಟೆಯ ನಂತರ ಮನೆಗೆ ಬಂದು ಹೋಗುವುದಾಗಿ ತಿಳಿಸಿದ್ದರು. ಅದರಂತೆ ನಿನ್ನೆ ರಾತ್ರಿ 09:00 ಗಂಟೆಯ ನಂತರ ಮೂಡಬಿದರೆ ಪೊಲೀಸ್ ಠಾಣಾ ಸಿಬ್ಬಂದಿ ಓರ್ವ ಮಹಿಳಾ ಸಿಬ್ಬಂದಿ ಯವರೊಂದಿಗೆ ಜೋಸ್ಸಿ ಆಂಟೋನಿ ಮನೆಗೆ ತೆರಳಿದ್ದರು. ಈ ವೇಳೆ ಆಂಟೋನಿ ಮನೆಯ ಬಾಗಿಲು ತೆರೆಯದೇ ಇದ್ದ ಕಾರಣ ಪೊಲೀಸ್​ ಸಿಬ್ಬಂದಿ ಠಾಣೆಗೆ ಮರಳಿ ಬಂದಿರುತ್ತಾರೆ. ಇದನ್ನು ಜೋಸ್ಸಿ ಆಂಟೋನಿ ತಪ್ಪಾಗಿ ಗ್ರಹಿಸಿ ಮಾಧ್ಯಮದಲ್ಲಿ ನಕ್ಸಲರು ಮನೆಗೆ ಬಂದಿರುತ್ತಾರೆ ಎಂದು ಹೇಳಿಕೆ ನೀಡಿರುತ್ತಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ ದಂಪತಿ; ಕೋರ್ಟ್​ಗೆ ಹಾಜರಾಗಲು ಬರುತ್ತಿದ್ದ ಪತ್ನಿ ಮೇಲೆ ಪತಿಯ ಹಲ್ಲೆ

ABOUT THE AUTHOR

...view details