ಬಂಟ್ವಾಳ: ಹಡಿಲು ಬಿದ್ದ ಕೃಷಿ ಭೂಮಿಯಲ್ಲಿ ಮತ್ತೆ ಕೃಷಿ ಮಾಡಲು ಸರ್ಕಾರ, ಸಹಕಾರ ಸಂಘಗಳು ಉತ್ತೇಜನ ನೀಡುತ್ತಿರುವ ಪ್ರಸ್ತುತ ದಿನಗಳಲ್ಲಿ ಇಲ್ಲಿನ ಮಹಿಳಾ ತಂಡ ಸ್ವ ಸಹಾಯ ಸಂಘಗಳ ಒಕ್ಕೂಟದ ಮೂಲಕ ಕೃಷಿ ಮಾಡಿ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆ ಹೊಂದಿದೆ. ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮ ವ್ಯಾಪ್ತಿಯ ಅಮೃತ ಸಂಜೀವಿನಿ ಹೆಸರಿನ ಒಕ್ಕೂಟ ಈ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಮಹಿಳೆಯರು ಉದ್ಯೋಗ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಕೆಲಸವಿಲ್ಲದೆ ಸುಮ್ಮನೆ ಕಾಲಹರಣ ಮಾಡುವ ಬದಲು ಉದ್ಯೋಗ ಮಾಡುವ ನಿಟ್ಟಿನಲ್ಲಿ ಅಮೃತ ಸಂಜೀವಿನಿ ಒಕ್ಕೂಟ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿದೆ. ಕಳೆದ ವರ್ಷ ಲಾಕ್ಡೌನ್ ಬಳಿಕ ಸಂಗಬೆಟ್ಟು ಗ್ರಾಮ ಪಂಚಾಯತ್ನಲ್ಲಿ ಅಮೃತ ಸಂಜೀವಿನಿ ಒಕ್ಕೂಟದ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಪ್ರೇಮಾ, ಬ್ಯಾಂಕ್ ಸಖಿ ವೇದಾವತಿ ಹಾಗೂ ಮುಖ್ಯ ಬರಹಗಾರ್ತಿ ಸುಕನ್ಯಾ ಅವರು ಸೇರಿ ಸಮಾಲೋಚನೆ ನಡೆಸಿ ಒಕ್ಕೂಟದ ಮೂಲಕ ಸಾಲ ನೀಡಿ ಕೃಷಿ ಅಭಿವೃದ್ಧಿ ಯೋಜನೆಯ ಯಶಸ್ಸಿಗೆ ಕಾರಣರಾಗಿದ್ದಾರೆ.
ಒಕ್ಕೂಟದಲ್ಲಿ ಒಟ್ಟು 59 ಗುಂಪುಗಳು ಕಾರ್ಯ ನಿರ್ವಹಿಸುತ್ತಿದ್ದು, 25 ಗುಂಪುಗಳು ಯೋಜನೆಯಲ್ಲಿ ಸಕ್ರಿಯವಾಗಿದೆ. 25 ತಂಡಗಳಲ್ಲಿ 4 ಗುಂಪಿನ ಸದಸ್ಯರು ಬ್ಯಾಂಕ್ನಿಂದ ಸಾಲ ಪಡೆದು ಆರ್ಥಿಕ ಹಾಗೂ ಸಮುದಾಯ ಬಂಡವಾಳ ತೆಗೆದುಕೊಂಡು ಜೀವನೋಪಾಯ ಚಟುವಟಿಕೆ ಮಾಡಿಕೊಂಡು ಬರುತ್ತಿದ್ದಾರೆ. ಅಣಬೆ ಬೀಜವನ್ನು ಪಡೆದು ಮನೆ ಬಳಿಯೇ ಅಣಬೆ ಕೃಷಿ ಮಾಡಿ ಪ್ರಗತಿ ಹೊಂದಿದ್ದಾರೆ. ಇದಕ್ಕೆ 10 ಸಾವಿರ ರೂ. ಸಬ್ಸಿಡಿ ಪಡೆದುಕೊಂಡಿದ್ದಾರೆ. ಒಕ್ಕೂಟದ ಸದಸ್ಯರು ಸ್ಥಳೀಯರಾದ ಸುಮಲತಾ ಅವರು ಹಡಿಲು ಭೂಮಿಯಲ್ಲಿ ಪೊದರು ತುಂಬಿದ ಜಾಗವನ್ನು ಜೆಸಿಬಿ ಯಂತ್ರದಲ್ಲಿ ಸಮತಟ್ಟು ಮಾಡಿ ವಿವಿಧ ರೀತಿಯ ತರಕಾರಿ ಬೀಜವನ್ನು ಬಿತ್ತನೆ ಮಾಡಿ ತರಕಾರಿ ಕೃಷಿ ನಡೆಸಿದ್ದಾರೆ.