ಮಂಗಳೂರು: ಡಾ. ಬಿ ಆರ್ ಅಂಬೇಡ್ಕರ್ ಸಮಾಜದ ಎಲ್ಲಾ ವರ್ಗಗಳಿಗೂ ಸೇರಿದವರು. ಎಲ್ಲರ ನಡುವೆ ಸಮಾನತೆ ತರಲು ಪ್ರಯತ್ನಿಸಿದವರು. ಈ ಚಿಂತನೆ ಅವರು ರಚಿಸಿದ ಸಂವಿಧಾನದಲ್ಲೂ ಪ್ರತಿಫಲಿಸುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಅವುಗಳ ಜಾರಿ ಅಗತ್ಯವಾಗಿದೆ ಎಂದು ರಾಜ್ಯಪಾಲ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆಗಿರುವ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ 66 ನೇ ಮಹಾ ಪರಿನಿರ್ವಾಣ ದಿನವಾದ ನಿನ್ನೆ ಮಂಗಳೂರು ವಿಶ್ವವಿದ್ಯಾನಿಲಯದ ವಿಜ್ಞಾನ ವಿಭಾಗದ ಬಳಿ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಮೂಲಕ ಸ್ಥಾಪಿಸಲಾಗಿರುವ ಬಾಬಾ ಸಾಹೇಬರ ಕಂಚಿನ ಪ್ರತಿಮೆಯನ್ನು ರಾಜ್ಯಪಾಲರು ಅನಾವರಣಗೊಳಿಸಿದರು. ಬಳಿಕ ಮಂಗಳಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅತ್ಯುನ್ನತ ಶಿಕ್ಷಣ ಪಡೆದಿದ್ದ ಅಂಬೇಡ್ಕರ್ ತಮ್ಮ ಸುಖಜೀವನವನ್ನು ನಿರ್ಲಕ್ಷಿಸಿ ಸಮಾಜದ ಲೋಪಗಳನ್ನು ತಿದ್ದಲು ಪ್ರಯತ್ನಿಸಿದರು ಎಂದರು.
'ಅಂಬೇಡ್ಕರ್ ಕೊಡುಗೆಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಈಗ ನಡೆದಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಹಲವರ ಪ್ರಯತ್ನದಿಂದ ಅಂಬೇಡ್ಕರ್ ಜನ್ಮಸ್ಥಳವಾದ ಮಾಹೋದಲ್ಲಿ ಅವರ ಸ್ಮಾರಕ ನಿರ್ಮಾಣವಾಗಿದೆ. ಈಗಿನ ಪ್ರಧಾನಿ ನರೇಂದ್ರ ಮೋದಿಯವರ ಅವಧಿಯಲ್ಲಿ ಅಂಬೇಡ್ಕರ್ ಅವರನ್ನು ಎಲ್ಲರೂ ಅರಿಯಬೇಕು ಎಂಬ ಉದ್ದೇಶದಿಂದ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಅಂಬೇಡ್ಕರ್ ಅವರ ಜನ್ಮಭೂಮಿ, ಶಿಕ್ಷಾ ಭೂಮಿ, ಕರ್ಮ ಭೂಮಿ, ದೀಕ್ಷಾ ಭೂಮಿ, ಪರಿನಿರ್ವಾಣ ಭೂಮಿ ಹಾಗೂ ಚೈತ್ಯ ಭೂಮಿಗಳು ಅವರ ಸಮಗ್ರ ಪರಿಚಯ ನೀಡುತ್ತವೆ' ಎಂದು ಹೇಳಿದರು.
ಇದನ್ನೂ ಓದಿ:ಬೀದರ್: ಅಂಬೇಡ್ಕರ್ ಭಾವಚಿತ್ರಕ್ಕೆ ದುಷ್ಕರ್ಮಿಗಳಿಂದ ಅವಮಾನ