ಮಂಗಳೂರು: ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತ ಮಾಡಿ, ಅವರು ರಚಿಸಿದ ಸಂವಿಧಾನವನ್ನು ಕೇವಲ ಮೀಸಲಾತಿ ನೀಡುವುದಕ್ಕೆ ಇರುವ ಪುಸ್ತಕ ಅಂದುಕೊಂಡಿರುವುದು ದುರಂತದ ಸಂಗತಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಹೇಳಿದರು.
ದ.ಕ ಜಿಲ್ಲಾಡಳಿತ, ಮನಪಾ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಪುರಭವನದಲ್ಲಿನಡೆದ ಡಾ. ಬಿ.ಆರ್.ಅಂಬೇಡ್ಕರ್ ಅವರ 130ನೇ ಜನ್ಮ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವಿಂದು ನಮ್ಮ ದೈನಂದಿನ ಬದುಕಿನಲ್ಲಿ ಯಾವುದೇ ತೊಂದರೆಗಳಿಲ್ಲದೆ ಬದುಕಲು ಸಂವಿಧಾನದ ಅಂಶಗಳು ಸಹಕಾರಿಯಾಗಿವೆ. ಸಂವಿಧಾನ ಈ ದೇಶದ ಜನತೆಗೆ ದೇಶದ ಯಾವ ಭಾಗದಲ್ಲಿ ಬೇಕಾದರೂ ಬದುಕಲು ಅವಕಾಶ ನೀಡಿದೆ. ಜೊತೆಗೆ ವಾಕ್ ಸ್ವಾತಂತ್ರ್ಯವನ್ನು ನೀಡಿದೆ ಎಂದರು.