ಪುತ್ತೂರು(ದಕ್ಷಿಣ ಕನ್ನಡ): ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಇಡಿ, ಐಟಿ ಮತ್ತು ಸಿಬಿಐಗಳನ್ನು ತನ್ನ ಸ್ವ ರಕ್ಷಣೆಯ ಸೊತ್ತುಗಳಾಗಿ ಬಳಸಿಕೊಳ್ಳುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವುದಕ್ಕಾಗಿ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಆರೋಪಿಸಿದ್ದಾರೆ.
ಬುಧವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಅಧಿವೇಶನವು ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ತನ್ನ ಮೇಲೆ ವಿಪಕ್ಷಗಳು ನಡೆಸುವ ಪ್ರಹಾರವನ್ನು ತಡೆಯಲು ಸಾಧ್ಯವಾಗದ ಬಿಜೆಪಿಯು ಇಂತಹ ದಾಳಿ ಮೂಲಕ ಅತ್ಮಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನ ನಡೆಸುತ್ತಿದೆ.
2017ರಲ್ಲಿ ಗುಜರಾತ್ ರಾಜ್ಯದ ಕಾಂಗ್ರೆಸ್ ಎಂಎಲ್‍ಎಗಳು, ಬಿಜೆಪಿಯ ಆಪರೇಶನ್ ಕಮಲಕ್ಕೆ ಒಳಗಾಗದಂತೆ ತಡೆಯಲು ಡಿಕೆಶಿ ಅವರು ರಾಜ್ಯದಲ್ಲಿ ಅವರಿಗೆ ವ್ಯವಸ್ಥೆ ಮಾಡಿದ್ದರು. ಇದನ್ನು ಸಹಿಸದೆ ಅಂದು ಅವರ ಮನೆಯ ಮೇಲೆ ದಾಳಿ ನಡೆಸಲಾಗಿತ್ತು. ಬಳಿಕ ಅದನ್ನು ಕಾಕತಾಳೀಯ ಎಂದು ಬಿಂಬಿಸಲಾಯಿತು. ಅದು ಕಳೆದು 5 ವರ್ಷಗಳಾದರೂ ಇಂದಿಗೂ ದಾಳಿ ಮುಗಿದಿಲ್ಲ. 2019ರಲ್ಲಿ ಡಿಕೆಶಿ ಅವರನ್ನು ಬಂಧಿಸಲಾಯಿತು.
2020ರ ಉಪಚುನಾವಣೆಯ ಸಂದರ್ಭದಲ್ಲಿ ಮತ್ತೊಮ್ಮೆ ದಾಳಿ ನಡೆಸಲಾಯಿತು. ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿಯೂ ದಾಳಿ ನಡೆಯಿತು. ಇದೀಗ 2022ರಲ್ಲಿ ಬೆಳಗಾವಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ದಾಳಿ ನಡೆಸಿ ಅವರ ವ್ಯಕ್ತಿತ್ವ ಹರಣಕ್ಕೆ ಮತ್ತು ರಾಜಕೀಯ ಪಕ್ಷವನ್ನು ಅನೈತಿಕವಾಗಿ ಮುಗಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ದೂರಿದರು.