ಮಂಗಳೂರು:ಲಾಕ್ಡೌನ್ ಸಂದರ್ಭದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಅನೇಕರು ತಮ್ಮ ಪ್ರತಿಭೆಗಳಿಗೆ ಸಾಣೆ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಹಳೆಯ ವಿದ್ಯಾರ್ಥಿನಿ ರಚನಾ ಅಮೀನ್ ಕೂಡಾ ಒಬ್ಬರು.
ರಚನಾ ಅಮೀನ್ ಅವರಿಂದ ತ್ರಿವಳಿ ನೃತ್ಯ ಪ್ರಯೋಗ ಕೊರೊನಾ ಭೀತಿಯಿಂದ ಮನೆಯಲ್ಲೇ ಇರಬೇಕಾದ ಅನಿವಾರ್ಯತೆಯನ್ನೇ ಸವಾಲಾಗಿ ಸ್ವೀಕರಿಸಿದ ರಚನಾ ಅಮೀನ್, 'ನೃತ್ಯಾಂಟೈನ್' ಎಂಬ ಶಾಸ್ತ್ರೀಯ ನೃತ್ಯದ ವಿನೂತನ ಪ್ರಯೋಗ ಮಾಡಿದ್ದಾರೆ. ಈ ಮೂಲಕ ತ್ರಿವಳಿ ನೃತ್ಯ ಸಂಯೋಜನೆಯನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಹುದ್ದೆಯಲ್ಲಿರುವ ರಚನಾ ಅಮೀನ್, ಕೊರೊನಾ ಪರಿಣಾಮ ವರ್ಕ್ ಫ್ರಮ್ ಹೋಂನಲ್ಲಿದ್ದರು. ಈ ಸಂದರ್ಭ ಏನಾದರೂ ಹೊಸ ಪ್ರಯೋಗ ಏಕೆ ಮಾಡಬಾರದು ಎಂಬ ಯೋಚನೆ ಬಂದಿದೆ. ಆಗ ಹೊಳೆದದ್ದೇ 'ನೃತ್ಯಾಂಟೈನ್' ಎಂಬ ಕಾನ್ಸೆಪ್ಟ್.
ಈ ಕಾನ್ಸೆಪ್ಟ್ ಮೂಲಕ ವಿವಿಧೆಡೆ ಇರುವ ಒಟ್ಟು 61 ನೃತ್ಯ ಕಲಾವಿದರಿಂದ ಅವರಿರುವ ಸ್ಥಳದಲ್ಲೇ ನೃತ್ಯ ಸಂಯೋಜಿಸಿ ಅದನ್ನು ವಿಡಿಯೋ ಮಾಡಿಸಿ ಎಲ್ಲಾ ತುಣುಕುಗಳನ್ನು ಎಡಿಟ್ ಮಾಡಿ ಯೂಟ್ಯೂಬ್ ಮೂಲಕ ಹರಿಯಬಿಟ್ಟಿದ್ದಾರೆ. 'ಮಾತೇ', 'ತಿಲ್ಲಾನ 2.0' ಹಾಗೂ 'ಸದಾ ನನ್ನು' ಎಂಬ ತ್ರಿವಳಿ ನೃತ್ಯ ಸಂಯೋಜನೆಯನ್ನು ಸಾವಿರಾರು ಮಂದಿ ನೋಡಿ ಮೆಚ್ಚಿದ್ದಾರೆ.
ಮೊದಲ ಪ್ರಯೋಗ 'ಮಾತೇ' ಎಂಬ ಮಧುರೈ ಮೀನಾಕ್ಷಿ ದೇವಿಯ ಸ್ತುತಿ ಪದ್ಯವುಳ್ಳ ಕಮಾಚ್ ರಾಗದ ದರುವರ್ಣದಲ್ಲಿ ರಚನಾ ಅಮೀನ್ ಸೇರಿ 23 ಕಲಾವಿದರು ನೃತ್ಯ ಮಾಡಿದ್ದಾರೆ. ಈ ನೃತ್ಯ ಸಂಯೋಜನೆಯನ್ನು ಮೂರು ವಾರಗಳ ಹಿಂದೆ ಯೂಟ್ಯೂಬ್ಗೆ ಅಪ್ಲೋಡ್ ಮಾಡಲಾಗಿದ್ದು 11 ಸಾವಿರ ಮಂದಿ ವೀಕ್ಷಿಸಿ, 851ಮಂದಿ ಲೈಕ್ ಮಾಡಿದ್ದಾರೆ. ಎಲ್ಲಾ ಕಮೆಂಟ್ಗಳಲ್ಲೂ ಪ್ರಯೋಗದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಎರಡನೇ ಸಂಯೋಜನೆ ಧನಾಶ್ರೀ ರಾಗದ 'ತಿಲ್ಲಾನ 2.0'ದಲ್ಲಿ ರಚನಾ ಅಮೀನ್ ಸೇರಿ 22 ಮಂದಿ ಕಲಾವಿದರು ನೃತ್ಯ ಮಾಡಿದ್ದು, ಒಂದು ವಾರದ ಹಿಂದೆ ಅಪ್ಲೋಡ್ ಆಗಿರುವ 4.24 ನಿಮಿಷದ ಈ ವಿಡಿಯೋವನ್ನು 17 ಸಾವಿರ ಮಂದಿ ವೀಕ್ಷಿಸಿದ್ದಾರೆ. ಒಂದು ಸಾವಿರ ಮಂದಿ ಲೈಕ್ ಮಾಡಿದ್ದು, 81 ಮಂದಿಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೂರನೇ ವಿಡಿಯೋಗೆ ಖ್ಯಾತ ನಟಿ ಸಾವಿತ್ರಿಯವರ ಬಯೋಪಿಕ್ ಆಧಾರಿತ 'ಮಹಾನಟಿ' ಸಿನಿಮಾದ 'ಸದಾ ನನ್ನು ನಡಿಪೇ ನೀ ಚೆಲಿಮೇ' ಎಂಬ ಹಾಡನ್ನು ಆಯ್ಕೆ ಮಾಡಲಾಗಿದೆ. ಸಿನಿಮಾದಲ್ಲಿ ಯಾವುದೇ ನೃತ್ಯ ಸಂಯೋಜನೆ ಇಲ್ಲದ ಈ ಹಾಡಿಗೆ ರಚನಾ ಅಮೀನ್ ಹಾಗೂ ಸಂಗಡಿಗರು ಉತ್ತಮವಾಗಿ ನೃತ್ಯ ಸಂಯೋಜಿಸಿದ್ದಾರೆ. 18 ಮಂದಿ ನೃತ್ಯಗಾರರು 4.02 ನಿಮಿಷದಲ್ಲಿ ಈ ಸಂಯೋಜನೆಗೆ ನೃತ್ಯ ಮಾಡಿದ್ದಾರೆ. ನಿನ್ನೆ ಮಧ್ಯಾಹ್ನ 12 ಗಂಟೆಗೆ ಈ ವಿಡಿಯೋವನ್ನು ಯೂಟ್ಯೂಬ್ಗೆ ಅಪ್ಲೋಡ್ ಮಾಡಿದ್ದು, ಈಗಾಗಲೇ 3,800 ಮಂದಿ ವೀಕ್ಷಿಸಿದ್ದಾರೆ. 550 ಮಂದಿ ಈ ವಿಡಿಯೋವನ್ನು ಲೈಕ್ ಮಾಡಿದ್ದು 135 ಮಂದಿ ಕಮೆಂಟ್ ಮಾಡಿದ್ದಾರೆ.
ಈ ಮೂರೂ ನೃತ್ಯ ಸಂಯೋಜನೆಯನ್ನು ಆಳ್ವಾಸ್ ಕಾಲೇಜಿನ ನೃತ್ಯ ವಿಭಾಗದ ಹಳೆಯ ವಿದ್ಯಾರ್ಥಿಗಳಿಂದಲೇ ಮಾಡಿಸಲಾಗಿದೆ. ರಚನಾ ಅಮೀನ್ ಅವರು ಮೊದಲಿಗೆ ಉದ್ಯೋಗ ನಿಮಿತ್ತ ವಿವಿಧೆಡೆ ಹಂಚಿ ಹೋಗಿದ್ದ ಸಹಪಾಠಿಗಳನ್ನು ಹುಡುಕಿ ನಂತರ ಎಲ್ಲರಿಗೂ ತಮ್ಮ ವಿನೂತನ ಪ್ರಯೋಗದ ಬಗ್ಗೆ ತಿಳಿಸಿ ನೃತ್ಯಗಾರರನ್ನು ಪ್ರಯೋಗಕ್ಕೆ ಸಿದ್ಧಪಡಿಸಿದ್ದಾರೆ. ವಿಶೇಷವೆಂದರೆ ವಿಡಿಯೋದಲ್ಲಿ ನೃತ್ಯ ಮಾಡಿದ ಬಹುತೇಕರು ದಿನನಿತ್ಯದ ಜಂಜಾಟ, ಒತ್ತಡಗಳಿಂದ ನೃತ್ಯಾಭ್ಯಾಸ ಬಿಟ್ಟಿದ್ದರು. ಇದಕ್ಕೆ ರಚನಾ ಅಮೀನ್ ಕೂಡಾ ಹೊರತಲ್ಲ. ಆದರೆ ಅವರ ಒಳಗಿನ ನೃತ್ಯದ ತುಡಿತ ಈ ವಿನೂತನ ಪ್ರಯೋಗವನ್ನು ಮಾಡಿಸಿದ್ದು, ಎಲ್ಲಾ ಹಳೆಯ ನೃತ್ಯ ವಿದ್ಯಾರ್ಥಿಗಳಿಗೂ ಉತ್ತಮ ವೇದಿಕೆ ಒದಗಿಸಿಕೊಟ್ಟಿದೆ.
ವಿಶೇಷವೆಂದರೆ ಎರಡನೇ ಸಂಯೋಜನೆ 'ತಿಲ್ಲಾನ 2.0' ದಲ್ಲಿ ಆಳ್ವಾಸ್ ಕಾಲೇಜಿನ ಹಳೆಯ ವಿದ್ಯಾರ್ಥಿನಿ, ಕಿರುತೆರೆ ನಟಿ ಹಾಗೂ ಬಿಗ್ಬಾಸ್ ಮಾಜಿ ಸ್ಪರ್ಧಿ ಚಂದನಾ ಅನಂತಕೃಷ್ಣ ನೃತ್ಯ ಮಾಡಿದ್ದಾರೆ. ಮೂರನೇ ವಿಡಿಯೋದಲ್ಲಿ ದುಬೈನಲ್ಲಿರುವ ರಂಜನಿ ಕೃಷ್ಣಮೂರ್ತಿ, ಸೌದಿ ಅರೇಬಿಯಾದಲ್ಲಿರುವ ಪೂಜಾ ಹಾಗೂ ಆಳ್ವಾಸ್ನ ನೃತ್ಯ ಶಿಕ್ಷಕಿ ಮೇರಿ ಬಿನಿಯವರು ನೃತ್ಯ ಮಾಡಿರುವುದು ವಿಶೇಷವಾಗಿದೆ. ಈ ನೃತ್ಯ ಸಂಯೋಜನೆಯಲ್ಲಿ ರಚನಾ ಅಮೀನ್ ಅವರ ಪರಿಶ್ರಮ ಎದ್ದು ಕಾಣುತ್ತಿದ್ದು, ವಿವಿಧೆಡೆ ಇರುವ ಕಲಾವಿದರಿಗೆ ಪದ್ಯವನ್ನು ಇಂತಿಷ್ಟೇ ಸೆಕೆಂಡ್ನಂತೆ ವಿಭಾಗ ಮಾಡಿ 4.50 ನಿಮಿಷದ ವಿಡಿಯೋಗೆ 23 ಕಲಾವಿದರಿಂದ, 4.23 ನಿಮಿಷಕ್ಕೆ 22 ಕಲಾವಿದರಿಂದ ಹಾಗೂ 4.02 ನಿಮಿಷದ ವಿಡಿಯೋಗೆ 18 ಕಲಾವಿದರಿಂದ ನೃತ್ಯ ಮಾಡಿಸುವ ಸವಾಲಿನ ಕೆಲಸ ಮಾಡಿದ್ದಾರೆ.
ವಿವಿಧ ಲೊಕೇಷನ್ಗಳಲ್ಲಿ ಚಿತ್ರೀಕರಿಸುವ ವಿಡಿಯೋ ತುಣುಕುಗಳನ್ನು ನೃತ್ಯದ, ಪದ್ಯದ ಭಾವಕ್ಕೆ ಭಂಗ ಬಾರದಂತೆ ಎಡಿಟ್ ಮಾಡುವುದು ಕೂಡಾ ಕಷ್ಟದ ಕೆಲಸ. ಇದನ್ನು ಮೌರ್ಯ ಎಸ್. ಅರವಿಂದ್ ಅದ್ಭುತವಾಗಿ ನಿಭಾಯಿಸಿದ್ದಾರೆ. ಈ ಸಂಯೋಜನೆ ಬಗ್ಗೆ ಮಾತನಾಡಿರುವ ರಚನಾ ಅಮೀನ್, 'ಈ ಐಡಿಯಾ ಹೊಳೆದ ಬಳಿಕ ಎಲ್ಲಾ ನೃತ್ಯ ಕಲಾವಿದರಿಗೂ ಹಾಡಿನ ಯಾವ ಭಾಗ ಕೊಡುವುದು ಎಂಬುದೇ ಸವಾಲಿನ ಕೆಲಸವಾಗಿತ್ತು. ಆ ಬಳಿಕ ನಿಗದಿತ ಸೆಕೆಂಡ್ನಂತೆ ಹಾಡಿನ ಟ್ರ್ಯಾಕನ್ನು ಕಟ್ ಮಾಡಿ ಅಷ್ಟು ಹಾಡಿಗೆ ನೃತ್ಯ ಮಾಡುವಂತೆ ಸೂಚಿಸಿದೆ.
ನನ್ನ ಪ್ರಯತ್ನಕ್ಕೆ ಎಲ್ಲರೂ ಉತ್ತಮವಾಗಿ ಸ್ಪಂದಿಸಿದ್ದಾರೆ. ಲಾಕ್ಡೌನ್ ನಿಯಮಕ್ಕೂ ಯಾವುದೇ ತೊಡಕಾಗದಂತೆ ಎಲ್ಲರೂ ಅವರಿರುವ ಸ್ಥಳಗಳಲ್ಲೇ, ಅವರವರ ಅನುಕೂಲಕ್ಕೆ ತಕ್ಕಂತೆ ವಿಡಿಯೋ ಚಿತ್ರೀಕರಿಸಿದ್ದಾರೆ. ನನಗೂ ಕೂಡಾ ಇದರಿಂದ ಇನ್ನಷ್ಟು ಸ್ಪೂರ್ತಿ ಬಂದಿದ್ದು ನೃತ್ಯದಲ್ಲಿ ಇದೇ ರೀತಿ ಸಾಧನೆ ಮಾಡಬೇಕೆಂಬ ಅಭಿಲಾಷೆ ಮೂಡಿದೆ. ಎಲ್ಲಕ್ಕಿಂತ ಮಿಗಿಲಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಅವರು ಕೂಡಾ ಈ ನೃತ್ಯ ಸಂಯೋಜನೆಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಇನ್ನಷ್ಟು ಸ್ಪೂರ್ತಿ ತುಂಬಿದೆ ಎಂದು ರಚನಾ ಸಂತೋಷ ವ್ಯಕ್ತಪಡಿಸಿದ್ದಾರೆ.