ಮಂಗಳೂರು:ರಾಷ್ಟ್ರೀಯ ಹೆದ್ದಾರಿ 169ರ ಮಂಗಳೂರು - ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯಲ್ಲಿ ಎನ್ಎಚ್ ಅಧಿಕಾರಿಗಳಿಂದ ಭ್ರಷ್ಟಾಚಾರ ನಡೆಯುತ್ತಿದೆ. ಹೆದ್ದಾರಿಯ ಭೂಸ್ವಾಧೀನಕ್ಕೆ ತಮ್ಮದೇನು ತಕರಾರಿಲ್ಲ. ಆದರೆ, ಭೂಮಿ ನೀಡಿರುವ ಭೂ ಮಾಲೀಕರಿಗೆ ಅಧಿಕಾರಿಗಳಿಂದ ವಂಚನೆ ಆಗುತ್ತಿದೆ ಎಂದು ಸಂತ್ರಸ್ತ ಭೂ ಮಾಲೀಕರು ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಭೂ ಮಾಲೀಕರ ಹೋರಾಟ ಸಮಿತಿಯ ಮುಖಂಡ ಬ್ರಿಜೇಶ್ ಶೆಟ್ಟಿ ಮಿಜಾರು ಮಾತನಾಡಿ, ಪ್ರಭಾವಿಗಳ, ಭೂಮಾಫಿಯಾಗಳ ಒತ್ತಡಕ್ಕೆ ಮಣಿದು ಅವರ ಅನುಕೂಲಕ್ಕೆ ಅನುಗುಣವಾಗಿ ಅಲೈನ್ಮೆಂಟ್ಗಳಲ್ಲಿ ಆಗಾಗ ಬದಲಾವಣೆ ಮಾಡಲಾಗುತ್ತಿದೆ. ಈ ಬಗ್ಗೆ ನಮ್ಮಲ್ಲಿ ಎನ್ಎಚ್ ಅಧಿಕಾರಿ ಮಾತನಾಡಿರುವ ವಾಯ್ಸ್ ರೆಕಾರ್ಡ್ ದಾಖಲೆಯೂ ಇದೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಭೂ ಮಾಲೀಕರಿಗೆ ಮಾಡುತ್ತಿರುವ ಅನ್ಯಾಯ, ವಂಚನೆ ಹಾಗೂ ಹಗರಣದ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದರು.
ಹೆದ್ದಾರಿ ಅಭಿವೃದ್ಧಿ ಕಾಮಗಾರಿಯಲ್ಲಿ ಎನ್ಎಚ್ ಅಧಿಕಾರಿಗಳಿಂದ ಭ್ರಷ್ಟಚಾರ ಆರೋಪ ಆರಂಭದಲ್ಲಿ ವಿಶೇಷ ಭೂ ಸ್ವಾಧೀನ ಅಧಿಕಾರಿಗಳು ಮೂರು ಗ್ರಾಮಗಳ ಅವಾರ್ಡ್ ಮಾರ್ಗಸೂಚಿಯಂತೆ ತಯಾರಿ ಮಾಡಿ ಹೆದ್ದಾರಿ ಇಲಾಖೆಯ ಪ್ರಾದೇಶಿಕ ಕಚೇರಿಗೆ ಅನುಮೋದನೆಗೆ ಕಳುಹಿಸಲಾಗಿತ್ತು. ಆದರೆ, ಅಲ್ಲಿಯ ಅಧಿಕಾರಿಗಳು ಒಪ್ಪಿಗೆ ನೀಡದ ಭೂ ಮಾಲೀಕರಿಗೆ ವಂಚನೆ ಮಾಡಲು ಅವಾರ್ಡ್ ಹಿಂದೆ ಕಳುಹಿಸಿ ಮಾರ್ಗಸೂಚಿಗಳನ್ನು ತಿರುಚಿದ್ದರು. ಪರಿಣಾಮ ನಮ್ಮ ಕೃಷಿ ಭೂಮಿಗೆ ಮಾರುಕಟ್ಟೆ ದರಕ್ಕಿಂತ 8 -10 ಪಟ್ಟು ಕಡಿಮೆ ಬೆಲೆ ನೀಡಲಾಯಿತು. ಈ ಬಗ್ಗೆ ಡಿಸಿ ಗಮನಕ್ಕೂ ತಂದಿದ್ದು, ಸರಿಯಾದ ಬೆಲೆ ನಿಗದಿ ಮಾಡಿ ಭೂ ಮಾಲೀಕರಿಗೆ ಪರಿಹಾರ ಕೊಡಬೇಕು ಎಂಬ ಶಿಫಾರಸಿಗೆ ಬೆಲೆ ಕೊಡದೇ ನಮ್ಮ ಮನವಿಯನ್ನು ಎನ್ಎಚ್ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು.
ಈ ನಡುವೆ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ನಾವು ಸಂಪರ್ಕಿಸಿದ್ದೇವೆ. ಆದರೆ, ಯಾವುದೇ ಪರಿಹಾರ ದೊರಕಿಲ್ಲ. ಈ ಭಾಗದ ಸುಮಾರು 250 ಮಂದಿ ಭೂ ಮಾಲೀಕರು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದೆವು. ಇಲ್ಲಿಯವರೆಗೆ ಅವಾರ್ಡ್ ಆಗಿರುವ ಶೇ 90ರಷ್ಟು ಕೃಷಿ ಭೂಮಿಗೆ ತಡೆಯಾಜ್ಞೆ ಪಡೆಯಲಾಗಿದೆ. ಆದರೆ, ಈವರೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಳೆದ ಒಂದು ವರ್ಷದಿಂದ ತಡೆಯಾಜ್ಞೆಗೆ ಪ್ರತಿಕ್ರಿಯೆ ದೊರಕಿಲ್ಲ. ಅಲ್ಲದೆ ಮಂಗಳೂರಿಗೆ ಆಗಮಿಸಿದ್ದ ಕೇಂದ್ರ ಭೂಸಾರಿಗೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ಮನವಿ ಸಲ್ಲಿಸಿದ್ದೆವು ಆದರೆ, ಈವರೆಗೆ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದರು.
ಇದನ್ನೂ ಓದಿ: ದಾವಣಗೆರೆ: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ನಿವಾಸದ ಮೇಲೆ ಎಸಿಬಿ ದಾಳಿ!