ಬಂಟ್ವಾಳ (ಉತ್ತರ ಕನ್ನಡ): 70 ವರ್ಷದ ಮಹಿಳೆಯೊಬ್ಬರನ್ನು ಆಕೆಯ ಮಗ ಮತ್ತು ಸೊಸೆ ಶೌಚಗೃಹದಲ್ಲಿ ಕೂಡಿ ಹಾಕಿ ಅಮಾನವೀಯವಾಗಿ ವರ್ತಿಸಿದ ಘಟನೆ ಬಂಟ್ವಾಳ ತಾಲೂಕಿನ ಬೆಂಜನಪದವಿನ ಕರಾವಳಿಸೈಟ್ ಎಂಬಲ್ಲಿ ನಡೆದಿದೆ. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೃದ್ಧೆ ಗಿರಿಜಾ ಎಂಬಾಕೆಯೇ ತನ್ನ ಮಗ ಹರಿರಾಮ್ ಮತ್ತು ಸೊಸೆ ಪೂಜಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, 2020ರ ಜನವರಿ 10ರಿಂದ 2022ರ ಜುಲೈ 6ರವರೆಗೆ ಕೂಡಿ ಹಾಕಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಗ ಮತ್ತು ಸೊಸೆಯೊಂದಿಗೆ ವಾಸವಾಗಿದ್ದ ವೃದ್ಧೆ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಬೆಂಜಪದವು ಎಂಬಲ್ಲಿರುವ ಅವರ ಮನೆಯ ಜಗುಲಿಯಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದರು. ಗಾಯಕ್ಕೆ ಮಗ ಮತ್ತು ಸೊಸೆ ಚಿಕಿತ್ಸೆ ಕೊಡಿಸದ ಕಾರಣ ನೋವಿನಿಂದ ನಡೆಯಲು ಸಾಧ್ಯವಾಗದೆ ಹಾಸಿಗೆಯಲ್ಲಿ ಮಲಗುವ ಪರಿಸ್ಥಿತಿ ಉಂಟಾಗಿತ್ತು.