ಮಂಗಳೂರು :ರಾಜ್ಯಾದ್ಯಂತ ನವರಾತ್ರಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ನವರಾತ್ರಿಯ ವಿಜಯದಶಮಿ ದಿನ ವಿದ್ಯಾರಂಭಕ್ಕೆ ವಿಶೇಷ ಮಹತ್ವ ಇದೆ. ಈ ದಿನ ಹೆಚ್ಚಿನವರು ತಮ್ಮ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸುವ ಜ್ಞಾನರ್ಜನೆಗೆ ಮುನ್ನುಡಿ ಬರೆಯುತ್ತಾರೆ.
ನಾಡಿನೆಲ್ಲೆಡೆ ಒಂದೆಡೆ ವಿಜಯದಶಮಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇನ್ನೊಂದೆಡೆ ತಾಯಿ ಶಾರದೆಯ ಆರಾಧನೆ ಮಾಡುವ ವಿದ್ಯಾರಂಭ ಕಾರ್ಯಕ್ರಮವು ನಡೆಯುತ್ತದೆ. ದೇವಿ ದೇವಸ್ಥಾನಗಳು ಸೇರಿದಂತೆ ಹಲವೆಡೆ ಶಾರದೆಯನ್ನು ಸ್ಥಾಪಿಸಿ ವಿದ್ಯಾರಂಭ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಈ ದಿನ ವಿವಿಧೆಡೆ ಸಾವಿರಾರು ಮಕ್ಕಳಿಗೆ ವಿದ್ಯಾರಂಭ ಮಾಡಿಸುತ್ತಾರೆ. ಈ ಮೂಲಕ ಮಕ್ಕಳ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಲಾಗುತ್ತದೆ.
ವಿಜಯದಶಮಿಯಂದು ವಿದ್ಯಾರಂಭ :ವಿದ್ಯಾರಂಭವನ್ನು ಶಿಕ್ಷಣದ ಅಧಿದೇವತೆ ಶಾರದೆಯನ್ನು ಪ್ರತಿಷ್ಠಾಪಿಸಿ ಮಾಡಲಾಗುತ್ತದೆ. ಶಾರದೆಯನ್ನು ನೆನೆದು ಬಾಳೆ ಎಲೆಯಲ್ಲಿ ತೆಂಗಿನಕಾಯಿ, ವೀಳ್ಯದೆಲೆ ಇಟ್ಟು ಅಕ್ಕಿಯಲ್ಲಿ ಓಂಕಾರ ಮತ್ತು ಅಕ್ಷರಗಳನ್ನು ಬರೆಸಲಾಗುತ್ತದೆ. ಅಕ್ಕಿಯ ರಾಶಿಯಲ್ಲಿ ಅರಿಸಿಣ ಕೊಂಬಿನಿಂದ ಮಕ್ಕಳ ಕೈಯಲ್ಲಿ ಅಕ್ಷರಗಳನ್ನು ಬರೆಸಲಾಗುತ್ತದೆ. ಇದು ಸಾಮಾನ್ಯ ಕ್ರಮವಾಗಿದ್ದರೆ, ಇನ್ನು ಸಂಗೀತ, ವೇದ, ನೃತ್ಯ ಸೇರಿದಂತೆ ವಿವಿಧ ಅಭ್ಯಾಸಗಳನ್ನು ಆರಂಭಿಸುವವರು ಕೂಡ ಶಾರದೆ ಮುಂದೆ ವಿದ್ಯಾರಂಭದ ವಿಧಿಯನ್ನು ಮಾಡುತ್ತಾರೆ.
ಯಾವುದೇ ಶುಭಕಾರ್ಯಗಳನ್ನು ಮಾಡುವಾಗ ದೇವರ ಮುಂದೆ ಪ್ರಾರ್ಥಿಸುವ ಕ್ರಮ ಇದೆ. ಸಣ್ಣ ಮಕ್ಕಳಿಗೆ ಅನ್ನ ಉಣಿಸುವ ಮುನ್ನ ದೇವರ ಮುಂದೆ ಅನ್ನಪ್ರಾಶನ ಸೇವೆ ಮಾಡುತ್ತಾರೆ. ಮಕ್ಕಳು ವಿದ್ಯಾಭ್ಯಾಸ ಆರಂಭಿಸುವಾಗ ದೇವರ ಮುಂದೆ ವಿದ್ಯಾರಂಭ ಕ್ರಮವನ್ನು ಮಾಡಿಸಲಾಗುತ್ತದೆ. ಹಾಗಾಗಿ ವಿಜಯದಶಮಿ ದಿನ ಸಾಮಾನ್ಯವಾಗಿ ಪೋಷಕರು ದೇವಾಲಯಗಳಿಗೆ ಬಂದು ಅಕ್ಷರಾಭ್ಯಾಸ ಮಾಡಿಸುತ್ತಾರೆ.