ಸುಬ್ರಹ್ಮಣ್ಯ:ರಾಜ್ಯ ಹಾಗೂ ಕೆಂದ್ರ ಸರ್ಕಾರಗಳು ಕರಾವಳಿಯ ಮೀನುಗಾರಿಕೆ, ಬಂದರು ಅಭಿವೃದ್ಧಿ ಮತ್ತು ಒಳನಾಡು ಮೀನುಗಾರಿಕೆಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಮೂಲಕ ಬೇರೆ ಬೇರೆ ಯೋಜನೆ ಅಡಿಯಲ್ಲಿ ಒಳನಾಡು ಮೀನುಗಾರಿಕೆಗೆ ಹೆಚ್ಚು ಅನುದಾನ ಒದಗಿಸುತ್ತಿದೆ. ಈ ಮೂಲಕ ಕರ್ನಾಟಕವನ್ನು ಮೀನುಗಾರಿಕೆಯಲ್ಲಿ ದೇಶದಲ್ಲೇ ಮೊದಲ ಸ್ಥಾನಕ್ಕೆ ತರುವ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ತಿಳಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಿಂದೆ ನಮ್ಮ ರಾಜ್ಯ ಒಂಬತ್ತನೇ ಸ್ಥಾನದಲ್ಲಿತ್ತು, ಇದೀಗ ನಾಲ್ಕನೇ ಸ್ಥಾನದಲ್ಲಿದೆ. ಮುಂದಿನ ಎರಡು ವರ್ಷದಲ್ಲಿ ಒಂದನೇ ಸ್ಥಾನ ಪಡೆಯುವ ಗುರಿ ನಮ್ಮಲ್ಲಿದೆ. ಮೀನನ್ನು ಬಳಸಿಕೊಂಡು ವಿವಿಧ ಉತ್ಪನ್ನಗಳನ್ನು ಮಾಡುವ ಬಗ್ಗೆ ಯೋಜನೆ ಮಾಡಲಾಗಿದೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ ಮೀನುಗಾರಿಕೆ ಜಾಗದಲ್ಲಿ ಮೀನಿನ ಬಯೋ ಡೀಸೆಲ್ ಉತ್ಪಾದನೆ ಮಾಡುವ ಬಗ್ಗೆ ಚಿಂತಿಸಲಾಗಿದೆ. ಈ ಯೋಜನೆಯ ವರದಿ ಬರಬೇಕಿದೆ. ಅದು ಬಂದ ಕೂಡಲೇ ಯೋಜನೆ ಆರಂಭಿಸಲಾಗುವುದು.
ಸಮುದ್ರ ಕೊರೆತ ತಡೆಗೆ ಕ್ರಮ:ಸಮುದ್ರ ಕೊರೆತ ತಡೆಗೆ ಈಗಿನ ತಾಂತ್ರಿಕತೆ ಬಳಸಿ ಸೀ ವೇವ್ ಬ್ರೇಕರ್ ಎನ್ನುವ ಯೋಜನೆಗೆ ಉಳ್ಳಾಲದ ಬಟ್ಟಂಪಾಡಿ ಎಂಬ ಜಾಗವನ್ನು ಗುರುತಿಸಲಾಗಿದೆ. ಬಟ್ಟಂಪಾಡಿ ಪ್ರದೇಶದಲ್ಲಿ ಅತೀ ವೇಗದ ಅಲೆಗಳು ಬರುತ್ತಿರುವುದರಿಂದ ಅಲ್ಲೇ ಆ ಯೋಜನೆಯನ್ನು ಪ್ರಾಯೋಗಿಕವಾಗಿ ಅಳವಡಿಸಿ, ಬಳಿಕ ಉಳಿದೆಡೆ ಕಾಮಗಾರಿ ನಡೆಸುವ ಬಗ್ಗೆ ಚಿಂತಿಸಲಾಗುವುದು. ಇದರ ವರದಿ ಸಿದ್ದಪಡಿಸಲು ಸರ್ಕಾರಿಂದ 25 ಲಕ್ಷ ಹಣ ನೀಡಬೇಕಿದೆ. 1 ಅಥವಾ 2 ವಾರದಲ್ಲಿ ವರದಿ ನಮ್ಮ ಕೈಸೇರಲಿದೆ ಎಂದರು.