ಬೆಳ್ತಂಗಡಿ:ರೈತರ ಕಲ್ಯಾಣಕ್ಕಾಗಿ ಕೃಷಿಭಾಗ್ಯದ ಮೂಲಕ ಸರ್ಕಾರದ ವತಿಯಿಂದ ನೂರು ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಹಬ್ ಯೋಜನೆ ಸದ್ಯದಲ್ಲೇ ಪ್ರಾರಂಭಿಸಲಿದ್ದು ರೈತರ ಮನೆ ಬಾಗಿಲಿಗೆ ಕೃಷಿ ಯಂತ್ರೋಪಕರಣಗಳ ಸೇವಾ ಸೌಲಭ್ಯ ಒದಗಿಸಲಾಗುವುದು ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದರು.
ಅವರು ಶನಿವಾರ ಧರ್ಮಸ್ಥಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಕೃಷಿ ವಿಸ್ತರಣಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ವಿತರಿಸಿ ಮಾತನಾಡಿದರು. ನೂರು ಕೋಟಿ ರೂ. ವೆಚ್ಚದ ಯೋಜನೆಯಲ್ಲಿ ಶೇ. 70 ರಷ್ಟು ಹಣ ಸರ್ಕಾರ ಭರಿಸುತ್ತದೆ. ಉಳಿದ ಶೇ. 30 ಹಣವನ್ನು ಖಾಸಗಿ ಸಂಸ್ಥೆಗಳು ಭರಿಸಬೇಕಾಗುತ್ತದೆ. ಖಾಸಗಿ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಯೋಜನೆ ಶೀಘ್ರ ಅನುಷ್ಠಾನಗೊಂಡು ರೈತರ ಭಾಗ್ಯದ ಬಾಗಿಲು ತೆರೆಯಲಿದೆ. ಈ ಬಗ್ಗೆ ಸರ್ಕಾರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಸಕ್ರಿಯ ಸಹಕಾರವನ್ನು ಸಚಿವರು ಕೋರಿದರು.
ಮಹಿಳೆಯರಿಗೆ ಹಾಗೂ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಶೂನ್ಯ ಬಡ್ಡಿ ದರದಲ್ಲಿ ರೂ. ಐದು ಲಕ್ಷ ಸಾಲ ನೀಡಲಾಗುತ್ತದೆ. ಸಾಲ ಮಂಜೂರಾತಿಯಲ್ಲಿ ಕೆಲವು ಸಮಸ್ಯೆಗಳಿದ್ದು ಈ ಬಗ್ಗೆ ಈಗಾಗಲೇ ಜಿಲ್ಲಾ ಸಹಕಾರಿ ಬ್ಯಾಂಕ್‌ಗಳ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಲಾಗಿದೆ. ಕೃಷಿ ಇಲಾಖೆಯಲ್ಲಿ ಖಾಲಿ ಇರುವ 350 ಹುದ್ದೆಗಳನ್ನು ಈಗಾಗಲೇ ಭರ್ತಿ ಮಾಡಲಾಗಿದೆ. ಸದ್ಯದಲ್ಲೇ ಇನ್ನೂ 2 ಸಾವಿರ ಸಿಬ್ಬಂದಿ ನೇಮಕಾತಿ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಸಾವಯವ ಕೃಷಿಯಿಂದ ಅಧಿಕ ಲಾಭಗಳಿಸಬಹುದು ಎಂದು ಹೇಳಿದ ಸಚಿವರು ಕೃಷಿ ಅಭಿವೃದ್ಧಿ ಮೂಲಕ ಜೀವನಮಟ್ಟ ಸುಧಾರಿಸಿ ಸ್ವಾವಲಂಬಿ ಜೀವನ ನಡೆಸಬಹುದು ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯದೆಲ್ಲೆಡೆ ಕೃಷಿಋಷಿಗಳ ಸೇವೆ-ಸಾಧನೆಯನ್ನು ಗುರುತಿಸಿ ಸಚಿವರು ವಿರೇಂದ್ರ ಹೆಗ್ಗಡೆ ದಂಪತಿಯನ್ನು ಅಭಿನಂದಿಸಿದರು.