ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯು ಜ್ವರದ ಬಾಧೆಯು ವ್ಯಾಪಿಸುತ್ತಿದ್ದು, ಜನರಲ್ಲಿ ಆತಂಕ ಎದುರಾಗುತ್ತಿದೆ. ದಿನವೊಂದಕ್ಕೆ 25-30 ಶಂಕಿತ ಡೆಂಗ್ಯು ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಇದರ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ ಎಂದುಡಾ. ರಾಜೇಶ್ವರಿ ದೇವಿ ಮಾಹಿತಿ ನೀಡಿದ್ದಾರೆ.
ದಿನದಿಂದ ದಿನಕ್ಕೆ ಈ ರೋಗದ ಪ್ರಕರಣಗಳು ಹೆಚ್ಚಾಗುತ್ತಿವೆ. ಮಂಗಳೂರು ನಗರದ ಗುಜ್ಜರಕೆರೆ ವ್ಯಾಪ್ತಿಯ ಗೋರಕ್ಷದಂಡು, ಅರೆಕೆರೆಬೈಲು, ಜಲಜಮ್ಮ ಕಂಪೌಂಡ್, ಅಲೆಮಾನ್ ಕಂಪೌಂಡ್, ಮುಳಿಹಿತ್ಲು, ಅಂಬಾನಗರ, ಹೊಯಿಗೆ ಬಜಾರ್, ಜಪ್ಪು ಮಾರುಕಟ್ಟೆ ವ್ಯಾಪ್ತಿಯಲ್ಲಿ ಅನೇಕ ಮಂದಿ ಡೆಂಗ್ಯುವಿನಿಂದ ಬಳಲುತ್ತಿದ್ದಾರೆ .
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯು ಜ್ವರದ ಬಾಧೆ ಇಲ್ಲಿನ ಸುಮಾರು 250ಕ್ಕೂ ಅಧಿಕ ಮಂದಿಗೆ ಡೆಂಗ್ಯು ಕಾಣಿಸಿಕೊಂಡಿದ್ದು, ಹಲವರು ಗುಣಮುಖರಾಗಿದ್ದಾರೆ. ಈ ಪ್ರದೇಶಗಳಲ್ಲದೆ ಮಂಗಳೂರಿನ ಬಲ್ಮಠ, ಕೊಡಿಯಾಲಬೈಲು, ಕದ್ರಿ, ವೆಲೆನ್ಸಿಯಾ, ಮಣ್ಣಗುಡ್ಡ ಸಹಿತ ವಿವಿಧ ಭಾಗಗಳಲ್ಲಿ ಡೆಂಗ್ಯು ಕಾಣಿಸಿಕೊಂಡಿದೆ. ಜಿಲ್ಲೆಯ ಇತರ ತಾಲೂಕುಗಳಾದ ಬೆಳ್ತಂಗಡಿ, ಪುತ್ತೂರು, ಕಡಬ, ಸುಳ್ಯ ಈ ಪ್ರದೇಶಗಳಲ್ಲಿಯೂ ಜನರಲ್ಲಿ ಡೆಂಗ್ಯು ಜ್ವರದ ಭೀತಿ ಎದುರಾಗಿದೆ. ಇದರಲ್ಲಿ 3 ವರ್ಷದ ಮಗುವಿನಿಂದ ಹಿಡಿದು 59 ವರ್ಷದ ವಯಸ್ಸಿನವರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವೆನ್ಲಾಕ್ ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ ಯಾರೂ ಡೆಂಗ್ಯು ರೋಗದಿಂದ ಮೃತರಾಗಿಲ್ಲ. ಬಹಳಷ್ಟು ಮಂದಿ ಕಾಯಿಲೆಯಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಪ್ರಸ್ತುತ 13 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೂ ಗುಣಮುಖರಾಗುತ್ತಿದ್ದಾರೆ ಎಂದುಡಾ. ರಾಜೇಶ್ವರಿ ದೇವಿ ಹೇಳಿದರು.