ಬೆಳ್ತಂಗಡಿ(ದಕ್ಷಿಣ ಕನ್ನಡ):ಬೆಳ್ತಂಗಡಿ ತಾಲೂಕಿನಲ್ಲಿರುವ ಐತಿಹಾಸಿಕ ಗಡಾಯಿ ಕಲ್ಲುಅಥವಾ ನರಸಿಂಹ ಗಡವನ್ನು ಚಿತ್ರದುರ್ಗದ ಸಾಹಸಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಬರಿಗೈಯಲ್ಲಿ ಏರಿ ಸಾಹಸ ಮೆರೆದಿದ್ದಾರೆ. ಫೌಂಡೇಶನ್ ಸ್ಥಾಪಿಸಿ ಹಲವಾರು ಮಕ್ಕಳಿಗೆ ತರಬೇತಿ ನೀಡುವ ಉದ್ದೇಶವನ್ನು ಇಟ್ಟುಕೊಂಡು ಸಮುದ್ರ ಮಟ್ಟದಿಂದ 1,700 ಅಡಿ ಎತ್ತರದ ಗಡಾಯಿಕಲ್ಲನ್ನು ಕೇವಲ 2 ಗಂಟೆಯಲ್ಲಿ ಹತ್ತಿ ಸಾಧನೆ ಮೆರೆದಿದ್ದಾರೆ. ಅದಲ್ಲದೇ ಮೇಲೆ ತಲುಪಿದ ಬಳಿಕ ಕನ್ನಡ ಬಾವುಟ ಹಾರಿಸಿ ಕರುನಾಡ ಪ್ರೇಮ ಮೆರೆದಿದ್ದಾರೆ.
ಭಾನುವಾರ ಬೆಳಗ್ಗೆ (ಫೆ.12) ಚಂದ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ದೇವಸ್ಥಾನದ ಮುಂಭಾಗದಿಂದ 2 ಕಿ.ಮೀ ನಡೆದುಕೊಂಡು ಹೋಗಿ ಗಡಾಯಿಕಲ್ಲು ಬುಡದಲ್ಲಿ 9.50ಕ್ಕೆ ತೆಂಗಿನಕಾಯಿ ಒಡೆದು 1,700 ಅಡಿ ಎತ್ತರದ ನರಸಿಂಹ ಗಡ ಹತ್ತಲು ಪ್ರಾರಂಭಿಸಿದ್ದಾರೆ. ವನ್ಯಜೀವಿ ಅರಣ್ಯ ವಿಭಾಗದಿಂದ ಅನುಮತಿ ಪಡೆದು ಉತ್ತರಾಭಿಮುಖವಾಗಿ ಕೈಗಳ ಸಹಾಯದಿಂದ ಗಡಾಯಿಕಲ್ಲು ಏರಲು ಆರಂಭಿಸಿದ್ದರು. ಸುರಕ್ಷತೆಯ ದೃಷ್ಟಿಯಿಂದ ಸೊಂಟಕ್ಕೆ ರೋಪ್ ಅಳವಡಿಸಿಕೊಂಡಿದ್ದರು.
20 ನಿಮಿಷಗಳ ವಿರಾಮ:ಹತ್ತಲು ಸುಮಾರು 2 ಗಂಟೆ ಅವಧಿ ತೆಗೆದುಕೊಂಡಿದ್ದ ಜ್ಯೋತಿರಾಜ್ ಮಧ್ಯ 20 ನಿಮಿಷಗಳ ವಿರಾಮವನ್ನಷ್ಟೇ ಪಡೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಸಾಧನೆಗೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ. ಇವರು ಮೇಲೇರಿ ಕನ್ನಡ ಧ್ವಜ ಹಾರಿಸಿದ ಕೂಡಲೇ ಸೇರಿದ್ದ ಜನಸ್ತೋಮ ಭಾರತಾಂಭೆಗೆ ಜೈಕಾರ ಹಾಕುವ ಮೂಲಕ ಜ್ಯೋತಿರಾಜ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಮಂಕಿಮ್ಯಾನ್ ಎಂದೇ ಪ್ರಸಿದ್ದಿ: ಈಗಾಗಲೇ ಚಿತ್ರದುರ್ಗದಲ್ಲಿ ಕೋಟೆ, ಹಲವಾರು ಎತ್ತರದ ಕಟ್ಟಡಗಳನ್ನು ಯಾವುದೇ ರೋಪ್ ಇಲ್ಲದೇ ಬರೀ ಕೈಯಲ್ಲಿ ಹತ್ತುವ ಮೂಲಕ 'ಮಂಕಿಮ್ಯಾನ್' ಎಂಬ ಹೆಸರು ಪಡೆದುಕೊಂಡಿದ್ದಾರೆ. ಇವರು ಇನ್ನಷ್ಟು ಸಾಧನೆ ಮೆರೆಯಲಿ. ಕರುನಾಡ ಕೀರ್ತಿ ಪತಾಕೆಯನ್ನು ಇನ್ನಷ್ಟು ಎತ್ತರಕ್ಕೆ ಹಾರಿಸಲಿ ಎಂಬುವುದೇ ನಮ್ಮ ಆಶಯ.