ದಕ್ಷಿಣ ಕನ್ನಡ: ಮಂಗಳೂರಿನ ಹೊರವಲಯದ ಗಂಜಿಮಠ ಬಳಿಯ ಮಳಲಿ ಮಸೀದಿ ವಿವಾದದ ಪ್ರಕರಣದಲ್ಲಿ ಇಂದು ಸುದೀರ್ಘ ವಿಚಾರಣೆ ನಡೆದಿದ್ದು, ನಾಳೆಗೆ ಮುಂದೂಡಲಾಗಿದೆ. ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್‌ನಲ್ಲಿ ನ್ಯಾಯಾಲಯದ ವ್ಯಾಪ್ತಿಯ ಬಗ್ಗೆ ವಿಚಾರಣೆ ನಡೆಯಿತು. ಮಸೀದಿ ಪರ ವಕೀಲರು ಜೂನ್ 6ರಂದು ವಾದ ಮಂಡಿಸಿದ್ದು, ವಿಎಚ್‌ಪಿ ಪರ ವಕೀಲ ಚಿದಾನಂದ ಕೆದಿಲಾಯ ವಾದ ಮಂಡಿಸಿದ್ದು, ವಾದ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ವಿಹೆಚ್‌ಪಿ ಪರ ವಕೀಲರು, ನಮ್ಮ ಅರ್ಜಿದಾರರು ಸಲ್ಲಿಸಿರುವ ಅರ್ಜಿಯು ವಕ್ಫ್ ಟ್ರಿಬ್ಯುನಲ್ ವ್ಯಾಪ್ತಿಗೆ ಬರುವುದಿಲ್ಲ. ವಕ್ಫ್ ಆಸ್ತಿ ಹೌದೋ, ಅಲ್ಲವೋ ಎಂಬುದನ್ನು ನಾವು ಪ್ರಶ್ನಿಸಿಲ್ಲ. ಅದೊಂದು ಐತಿಹಾಸಿಕ ಸ್ಮಾರಕ ಅಥವಾ ದೇವಸ್ಥಾನವಾಗಿತ್ತು. ಹೀಗಾಗಿ ಅದರ ಸಂರಕ್ಷಣೆ ಮಾಡುವಂತೆ ನಮ್ಮ ಅರ್ಜಿದಾರರು ಹೇಳಿದ್ದಾರೆ. ಮಸೀದಿಯ ಕಟ್ಟಡ ಮಸೀದಿಯೋ ಅಥವಾ ಐತಿಹಾಸಿಕ ಸ್ಮಾರಕವೋ ಎಂಬುದನ್ನು ವಕ್ಫ್ ಟ್ರಿಬ್ಯೂನಲ್ ತೀರ್ಮಾನಿಸಲು ಆಗುವುದಿಲ್ಲ. ಹೀಗಾಗಿ ಅದನ್ನು ಸಿವಿಲ್ ಕೋರ್ಟ್ ನಿರ್ಧರಿಸಬೇಕು. ಹೀಗಾಗಿ ಆ ಜಾಗದ ಸರ್ವೆಗೆ ಆದೇಶ ಮಾಡಿದರೆ ಅಲ್ಲಿನ ಸ್ಮಾರಕ ಯಾವುದು ಎಂಬುದು ತಿಳಿಯಲಿದೆ ಎಂದು ವಿಹೆಚ್‌ಪಿ ಪರ ವಕೀಲ ಚಿದಾನಂದ ಕೆದಿಲಾಯ ವಾದಿಸಿದರು.