ಮಂಗಳೂರು: ಕೊರೊನಾ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಕಾರದ ನಿಯಮದಂತೆ ಉಚಿತ ಚಿಕಿತ್ಸೆ ಎಲ್ಲರಿಗೂ ಲಭ್ಯವಿದೆ. ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಬೆಡ್ಗಳು ಖಾಲಿ ಇಲ್ಲದಿದ್ದಲ್ಲಿ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ. ಅಲ್ಲಿ ಅವರಿಗೆ ಆರೋಗ್ಯ ಕರ್ನಾಟಕ ಹಾಗೂ ಆಯುಷ್ಮಾನ್ ಭಾರತ ಕಾರ್ಡ್ ಮೂಲಕ ಚಿಕಿತ್ಸೆ ಕೊಡಲಾಗುತ್ತದೆ. ಆದರೆ ಖಾಸಗಿ ಆಸ್ಪತ್ರೆಗಳು ಸರ್ಕಾರ ವಿಧಿಸಿರುವ ದರವನ್ನು ಅನುಸರಿಸಬೇಕು ಎಂದು ದ.ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.
ದ.ಕ.ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ತಮ್ಮ ಕಚೇರಿಯಲ್ಲಿ ಮೊದಲ ಬಾರಿಗೆ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ಚಿಕಿತ್ಸೆಗೆಂದು ಪ್ರತ್ಯೇಕವಾಗಿ ಖಾಸಗಿ ಆಸ್ಪತ್ರೆಗೆ ಹೋಗುವವರಿಗೂ ಸರ್ಕಾರ ಇಂತಿಷ್ಟೇ ದರ ವಿಧಿಸಬೇಕೆಂದು ನಿಯಮ ಇದೆ. ಅದನ್ನು ಮೀರಿ ಖಾಸಗಿ ಆಸ್ಪತ್ರೆಗಳು ಹೆಚ್ಚಿನ ದರ ವಿಧಿಸಿದ್ದಲ್ಲಿ ಅವರು ಬರೀ ಕೋವಿಡ್ ಸೋಂಕಿತರೇ ಅಥವಾ ಇನ್ನಿತರ ರೋಗಗಳಿಗೆ ತುತ್ತಾಗಿದ್ದಾರೆಯೇ ಎಂದು ಪರಿಶೀಲನೆ ನಡೆಸಲಾಗುತ್ತದೆ. ಆಗ ಸರ್ಕಾರ ವಿಧಿಸಿರುವ ನಿಯಮವನ್ನು ಮೀರಿ ದರವನ್ನು ವಿಧಿಸಿದ್ದಲ್ಲಿ ಅಂತಹ ಆಸ್ಪತ್ರೆಗಳ ಮೇಲೆ ಖಂಡಿತಾ ಕ್ರಮ ಕೈಗೊಳ್ಳಲಾಗುತ್ತದೆ.