ಮಂಗಳೂರು : ವಧುವಿನ ಮನೆಗೆ ಬರುವ ವೇಳೆ ಕೊರಗಜ್ಜನ ವೇಷ ಧರಿಸಿ ಬಂದು ದೈವದ ಅವಮಾನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವರನಿಗೆ ತನ್ನ ಅರಿವಾಗಿದೆ. ವಿವಾದ ಭುಗಿಲೇಳುತ್ತಿದ್ದಂತೆ ಎಚ್ಚೆತ್ತುಕೊಂಡ ಯುವಕ ಕ್ಷಮೆಯಾಚನೆ ಮಾಡಿದ್ದಾನೆ.
ಜಿಲ್ಲೆಯ ಬಂಟ್ವಾಳ ತಾಲೂಕಿನ ಸಾಲೆತ್ತೂರಿನ ವಧುವಿನ ಮನೆಗೆ ರಾತ್ರಿ ಗೆಳೆಯರೊಂದಿಗೆ ಬಂದಿದ್ದ ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳದ ವರ ಕೊರಗಜ್ಜ ದೈವದ ವೇಷ ಧರಿಸಿ ಬಂದಿದ್ದ. ಈತನ ಗೆಳೆಯರು ಕೊರಗಜ್ಜ ದೈವದ ವೇಷಧಾರಣೆ ಮಾಡಿಸಿ ವಧುವಿನ ಮನೆಗೆ ಕರೆದುಕೊಂಡು ಬಂದಿದ್ದರು. ಇದರ ವಿಡಿಯೋ ವೈರಲ್ ಆದ ಬಳಿಕ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಹಿಂದೂ ಸಂಘಟನೆ ಕಾರ್ಯಕರ್ತರು ವಧುವಿನ ಮನೆಗೆ ಮುತ್ತಿಗೆ ಯತ್ನವನ್ನು ನಡೆಸಿದ್ದರು. ಮುಸ್ಲಿಂ ವರನ ಕೃತ್ಯವನ್ನು ಮುಸ್ಲಿಂ ಸಮುದಾಯದ ಮುಖಂಡರು ಸಹ ಖಂಡಿಸಿದ್ದರು.
ಘಟನೆಯ ಹಿನ್ನೆಲೆಯಲ್ಲಿ ವರ ಬಾಷಿತ್ ಉಪ್ಪಳ ಕ್ಷಮೆಯಾಚಿಸಿದ್ದಾನೆ. ಎಲ್ಲಾ ಧರ್ಮದ ಬಗ್ಗೆ ಗೌರವ ಇದೆ. ಯಾವುದೇ ಧರ್ಮದ ನಂಬಿಕೆಗೆ ನೋವುಂಟು ಮಾಡುವ ಉದ್ದೇಶ ನನಗಿರಲಿಲ್ಲ. ಸ್ನೇಹಿತರು ಮುಟ್ಟಾಲೆ ಮತ್ತು ಬಣ್ಣ ಬಳಿದದ್ದು ಮನೋರಂಜನಾ ಉದ್ದೇಶಕ್ಕೆ ಹೊರತು ಅವಹೇಳನ ಮಾಡುವ ಉದ್ದೇಶದಿಂದಲ್ಲ. ಇದರಿಂದಾಗಿ ಯಾವುದೇ ಧರ್ಮಕ್ಕೆ, ಕೊರಗ ಸಮಾಜಕ್ಕೆ, ನಂಬಿಕೆಗೆ ಮತ್ತು ಭಾವನೆಗೆ ನೋವಾಗಿದ್ದರೆ ಅದಕ್ಕೆ ವಿಷಾದಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ ಎಂದು ವಿಡಿಯೋ ಮೂಲಕ ತಿಳಿಸಿದ್ದಾನೆ.