ಬಂಟ್ವಾಳ: ಶಾಸಕ ಹರೀಶ್ ಪೂಂಜಾ ಕಾರು ಅಡ್ಟಗಟ್ಟಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ತನಿಖೆ ನಡೆಸಿದ ಪೊಲೀಸರು ಆರೋಪಿಯಿಂದ ಕೆಲ ಸ್ವತ್ತುಗಳನ್ನು ವಶಪಡಿಸಿಕೊಂಡರು.
ಗುರುವಾರ ರಾತ್ರಿ ಸುಮಾರು11.15ಕ್ಕೆ ಘಟನೆ ನಡೆದಿದ್ದು, ಶಾಸಕ ಪೂಂಜಾ ಕಾರು ಚಾಲಕನ ದೂರಿನಂತೆ ಮಂಗಳೂರು ನಗರ ಹೊರವಲಯದ ಫರಂಗಿಪೇಟೆ ಎಂಬಲ್ಲಿ ಘಟನೆ ನಡೆದಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರು, ಆರೋಪಿ ಫಳ್ನೀರ್ ನಿವಾಸಿ ರಿಯಾಜ್ (38) ಎಂಬಾತನನ್ನು ವಶಕ್ಕೆ ತೆಗೆದುಕೊಂಡಿದ್ದರು.
ಬಳಿಕ ಆತನ ವಿಚಾರಣೆ ನಡೆಸಿದ ಸಂದರ್ಭ ಮಾರಕಾಯುಧಗಳು ಕಂಡುಬಂದಿರಲಿಲ್ಲ, ಘಟನೆಗೆ ಸಂಬಂಧಿಸಿ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಆರೋಪಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇದುವರೆಗೂ ಇರಲಿಲ್ಲ ಹಾಗೂ ಯಾವುದೇ ಆಯುಧಗಳು ಆತನ ಬಳಿ ಇರಲಿಲ್ಲ. ರಸ್ತೆಯಲ್ಲಿ ವಾಹನ ಓವರ್ ಟೇಕ್ ಮಾಡುವ ಸಂದರ್ಭದ ಜಗಳ ಘಟನೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು, ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಋಷಿಕೇಶ್ ಸೋನಾವಣೆ ತಿಳಿಸಿದ್ದರು.
ಶನಿವಾರ ಮತ್ತಷ್ಟು ತನಿಖೆಯನ್ನು ನಡೆಸಿದ ಪೊಲೀಸರು ಆರೋಪಿಯ ಮನೆಯಲ್ಲಿ ಹುಡುಕಾಟ ನಡೆಸಿ, ಎರಡು ಮೊಬೈಲ್, ವಾಹನಗಳಿಗೆ ಉಪಯೋಗಿಸುವ ಸ್ಪ್ಯಾನರ್ ರಾಡ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಸ್ಪಾನರ್ ಅನ್ನು ಬೀಸಿದ ಆರೋಪಿ, ದೂರುದಾರರನ್ನು ಬೆದರಿಸಿದ್ದಾಗಿ ತನಿಖೆಯಿಂದ ತಿಳಿದುಬಂದಿದ್ದು, ಹೆಚ್ಚಿನ ತನಿಖೆ ಸಾಗಿದೆ ಎಂದು ಎಸ್ಪಿ ಋಷಿಕೇಶ್ ಸೋನಾವಣೆ ತಿಳಿಸಿದ್ದಾರೆ.
ಇದನ್ನೂ ಓದಿ:ಓವರ್ಟೇಕ್ ವಿಚಾರದಲ್ಲಿ ಶಾಸಕ ಹರೀಶ್ ಪೂಂಜಾಗೆ ತಲ್ವಾರ್ ಝಳಪಿಸಿದ ಆರೋಪಿ.. ಗನ್ಮ್ಯಾನ್ ವಾಪಸ್ ಕಳುಹಿಸಿದ ಶಾಸಕ