ಪದವಿ ಫಲಿತಾಂಶ ವಿಳಂಬ : ಮಂಗಳೂರು ವಿವಿ ಆಡಳಿತಸೌಧದ ಎದುರು ಎಬಿವಿಪಿ ಪ್ರತಿಭಟನೆ ಉಳ್ಳಾಲ(ದಕ್ಷಿಣ ಕನ್ನಡ):ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಫಲಿತಾಂಶ ವಿಳಂಬ ಖಂಡಿಸಿ ಕೊಣಾಜೆ ಮಂಗಳೂರು ವಿವಿ ಆಡಳಿತ ಕಚೇರಿಗೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿರುವ ಘಟನೆ ಇಂದು ನಡೆದಿದೆ. ಈ ನಡುವೆ ಆಡಳಿತ ಕಚೇರಿಯಲ್ಲಿ ನಡೆಯುತ್ತಿದ್ದ ಸಿಂಡಿಕೇಟ್ ಸಭೆಗೆ ಎಬಿವಿಪಿ ಕಾರ್ಯಕರ್ತರು ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆಹಿಡಿದಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯವು ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡದೆ ಸತಾಯಿಸುತ್ತಿದೆ. ಅಂಕಪಟ್ಟಿ ಬಾರದೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ಅವಕಾಶ ಸಿಗುತ್ತಿಲ್ಲ. ಮೌಲ್ಯಮಾಪನವನ್ನು ಸೂಕ್ತ ಸಮಯದಲ್ಲಿ ನಡೆಸದಿರುವುದು ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಅಲ್ಲದೆ ಎನ್‌ಇಪಿ ಜಾರಿಯಾದ ನಂತರ ಮೊದಲನೇ ವರ್ಷಕ್ಕೆ ಸೇರ್ಪಡೆಯಾದ ವಿದ್ಯಾರ್ಥಿಗಳು ಪ್ರಸ್ತುತ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರೂ, ಪ್ರಥಮ ಹಾಗೂ ದ್ವಿತೀಯ ಸೆಮಿಸ್ಟರ್ ನ ಫಲಿತಾಂಶವನ್ನು ಈವರೆಗೂ ನೀಡಿಲ್ಲ. ಈ ಸಮಸ್ಯೆಗೆ ಮಂಗಳೂರು ವಿವಿಯ ಕುಲಪತಿ ಹಾಗೂ ಪರೀಕ್ಷಾಂಗ ಕುಲಸಚಿವರು ಕಾರಣ ಎಂದು ಎಬಿವಿಪಿ ಮಂಗಳೂರು ವಿಭಾಗ ಸಂಚಾಲಕ ಹರ್ಷಿತ್ ಕೊಯ್ಲ ಆರೋಪಿಸಿದರು.
ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿದ ಪರೀಕ್ಷಾಂಗ ಕುಲಸಚಿವ ಪ್ರೊ. ಪಿ.ಎಲ್. ಧರ್ಮ ಅವರು, ವಿದ್ಯಾರ್ಥಿಗಳು ಫಲಿತಾಂಶ ವಿಳಂಬಕ್ಕೆ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಪರವಾಗಿ ಕೆಲಸ ಮಾಡುತ್ತಿದೆ. ಕೆಲವು ತಾಂತ್ರಿಕ ದೋಷಗಳಿಂದ ಈ ರೀತಿಯಾಗಿದೆ. ಈ ಬಗ್ಗೆ ಪರೀಕ್ಷಾಂಗ ಕುಲಸಚಿವರ ರಾಜೀನಾಮೆ ಆಗ್ರಹಿಸುತ್ತಿದ್ದು, ಒಂದು ವೇಳೆ ನನ್ನಿಂದ ಸಮಸ್ಯೆ ಆಗಿದ್ದರೆ ಇದರ ನೈತಿಕ ಹೊಣೆಯನ್ನು ಹೊತ್ತು ರಾಜೀನಾಮೆ ನೀಡಲು ಸಿದ್ಧನಾಗಿಯೇ ಬಂದಿದ್ದೇನೆ ಎಂದರು.
ಜ.25ರೊಳಗೆ ಫಲಿತಾಂಶ ಪ್ರಕಟ : ಇನ್ನು, ವಿದ್ಯಾರ್ಥಿಗಳು ವಾಸ್ತವ ಅರ್ಥಮಾಡಿಕೊಂಡಿಲ್ಲ. ಒಂದು ದಿನವೂ ರಜೆ ಹಾಕದೆ ವಿವಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಯುಸಿಎಂಎಸ್ ನದ್ದೇ ನಮಗೆ ಸಮಸ್ಯೆ ಆಗಿರುವುದು. ಸರ್ವರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸರ್ಕಾರದ ವಿರುದ್ಧ ನಾನು ಮಾತನಾಡುತ್ತಿಲ್ಲ. ವ್ಯವಸ್ಥೆ ವಿರುದ್ಧ ಮಾತನಾಡುತ್ತಿದ್ದೇನೆ. ಜನವರಿ 25ರ ಒಳಗಡೆ ಫಲಿತಾಂಶ ಪ್ರಕಟಣೆಗೆ ಎಲ್ಲ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಪರೀಕ್ಷಾಂಗ ಕುಲಸಚಿವರ ಭರವಸೆಯ ಮೇರೆಗೆ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ಕೈಬಿಟ್ಟಿದ್ದಾರೆ. ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಚಿನ್ ಕುಲಗೇರಿ, ತಾಲೂಕು ಸಂಚಾಲಕ ಆದರ್ಶ್ ಉಪ್ಪಾರ, ಜಿಲ್ಲಾ ಸಂಚಾಲಕ ಶ್ರೇಯಸ್ ಶೆಟ್ಟಿ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.
ಇದನ್ನೂ ಓದಿ :ಕರ್ನಾಟಕ ಲೋಕಾಯುಕ್ತ ವಿಭಾಗದಿಂದ ಪುತ್ತೂರಿನಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ