ಉಳ್ಳಾಲ :ಅನ್ಯರ ಆರೋಗ್ಯ ರಕ್ಷಣೆಯ ಪಣತೊಟ್ಟು ಕೆಲಸ ಮಾಡಿದ ಕೊರೊನಾ ವಾರಿಯರ್ಸ್ಗಳನ್ನು ಗುರುತಿಸಿ ಅಭಿನಂದಿಸಿದ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಗೌರವ ಇಮ್ಮಡಿಯಾಗಿದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅಭಿಪ್ರಾಯಪಟ್ಟರು.
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಮತ್ತು ಕೆಆರ್‌ಇಸಿ/ಎನ್‍ಐಟಿಕೆ-76 ಸಹಯೋಗದಲ್ಲಿ ಕೊರೊನಾ ವಾರಿಯರ್ಸ್ಗೆ ಭಾನುವಾರ ಉಳ್ಳಾಲ ನಗರಸಭೆಯ ಮಹಾತ್ಮ ಗಾಂಧಿ ರಂಗಮಂದಿರದಲ್ಲಿ ನಡೆದ ಸೇವಾಭಿನಂದನೆಯಲ್ಲಿ ಅವರು ಮಾತನಾಡಿದರು. ನನ್ನ ಆರೋಗ್ಯ ನನ್ನಲ್ಲಿಲ್ಲ, ಇತರರ ಆರೋಗ್ಯವನ್ನು ಅವಲಂಬಿಸಿದೆ ಎಂಬ ಕಾಲಘಟ್ಟದಲ್ಲಿ ನಾವಿಂದು ಜೀವಿಸುತ್ತಿದ್ದೇವೆ. ಆದಷ್ಟು ಬೇಗನೆ ಸಮಾಜವು ಕೋವಿಡ್ ಮುಕ್ತವಾಗಲಿ ಎಂದು ಆಶಿಸಿದರು.