ಮಂಗಳೂರು: ಯುವತಿಯೋರ್ವರು ತಾವು ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಸಹ ಪ್ರಯಾಣಿಕನಿಂದ ಅನುಭವಿಸಿದ ಲೈಂಗಿಕ ಕಿರುಕುಳದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ಇದು ಎಲ್ಲೆಡೆ ವೈರಲ್ ಆಗುತ್ತಿದೆ.
ನಗರದ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಿಂದ ಖಾಸಗಿ ಬಸ್‌ನಲ್ಲಿ ಪಂಪ್‌ವೆಲ್‌ಗೆ ಜ.14ರಂದು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇಡೀ ಘಟನೆಯ ಬಗ್ಗೆ ಯುವತಿ ತನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಆ ಪೋಸ್ಟ್ ವೈರಲ್ ಆಗಿದೆ.
ಜ. 14ರಂದು ಮಧ್ಯಾಹ್ನ 3.45ರ ಸುಮಾರಿಗೆ ನಾನು ಬಸ್‌ನಲ್ಲಿ ಪಂಪ್‌ವೆಲ್‌ಗೆ ತೆರಳುತ್ತಿದ್ದೆ. ಈ ವೇಳೆ ವ್ಯಕ್ತಿಯೋರ್ವನು ಆಸ್ಪತ್ರೆ ನಿಲ್ದಾಣದಿಂದ ಬಸ್‌ಗೆ ಹತ್ತಿದ್ದು, ನನ್ನ ಪಕ್ಕದಲ್ಲಿ ಬಂದು ಕುಳಿತುಕೊಂಡಿದ್ದಾನೆ. ಈ ವೇಳೆ ಆತ ಫೋನ್‌ನಲ್ಲಿ ಮಾತನಾಡುವಂತೆ ನಟಿಸುತ್ತಾ ಇನ್ನೊಂದು ಕೈಯಲ್ಲಿ ನನ್ನನ್ನು ಸ್ಪರ್ಶಿಸಲು ಪ್ರಾರಂಭಿಸಿದ್ದಾನೆ. ಇದರಿಂದ ನಾನು ಸರಿದು ಕುಳಿತೆ. ಆದರೆ ಆತ ತನ್ನ ಚಾಳಿ ಬಿಡಲಿಲ್ಲ. ಅಸಹನೆಗೊಂಡ ನಾನು ಕೂಗಿಕೊಂಡೆ. ಸ್ವಲ್ಪ ಸಮಯದ ಬಳಿಕ ಆತ ಅವನು ನನ್ನಲ್ಲಿ ಕ್ಷಮೆ ಕೇಳಿ ಹಿಂಬದಿ ಸೀಟ್‌ನಲ್ಲಿ ಕುಳಿತುಕೊಂಡ. ಬಳಿಕ ಮೂರು ಸ್ಟಾಪ್ ಕಳೆದು ಆತ ಬಸ್ ಇಳಿದ. ಆದರೆ ಆತ ಮತ್ತೆ ಬಸ್‌ಗೆ ಹತ್ತಿ ಪುನಃ ನನ್ನ ಬಳಿ ಬಂದು ಕುಳಿತುಕೊಂಡ. ಅಲ್ಲದೇ ಪುನಃ ನನ್ನನ್ನು ಸ್ಪರ್ಶಿಸಲು ಆರಂಭಿಸಿದ. ಈ ವೇಳೆ ನಾನು ಆತನಲ್ಲಿ ಪುರುಷರ ಸೀಟ್‌ನಲ್ಲಿ ಕುಳಿತುಕೊಳ್ಳಲು ಹೇಳಿದೆ. ಆದರೆ, ಆತ ನನ್ನ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಪುನಃ ಸ್ಪರ್ಶಿಸಲು ಆರಂಭಿಸಿದ. ದುರಾದೃಷ್ಟವೆಂದರೆ ಈ ರೀತಿ ನಡೆಯುತ್ತಿದ್ದರೂ ಕೂಡ ಉಳಿದ ಪ್ರಯಾಣಿಕರು, ನಿರ್ವಾಹಕ, ಚಾಲಕ ನನ್ನನ್ನು ನೋಡುತ್ತಿದ್ದಾರೆಯೇ ಹೊರತು ಯಾವುದೇ ರೀತಿಯಲ್ಲಿ ಆತನಿಗೆ ಜೋರು ಮಾಡಿಲ್ಲ.