ಬೆಳ್ತಂಗಡಿ: ಸುಮಾರು 800 ವರ್ಷಗಳ ಐತಿಹ್ಯವಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ದೇವಾಯಲಕ್ಕೆ ಆಗಮಿಸುವ ಅನೇಕ ಭಕ್ತರು ತಮ್ಮ ಭಕ್ತ್ಯಾನುಸಾರ ಮನೆಯಲ್ಲಿ ಬೆಳೆ, ಭತ್ತ, ತರಕಾರಿ, ಫಲ, ಪುಷ್ಪವನ್ನು ಸಮರ್ಪಿಸುವುದು ವಾಡಿಕೆ. ಆದರೆ, ಕಳಸದ ಹಿರೇಬೈಲ್‌ನ ಶ್ರೇಯಾಂಸ್ ಜೈನ್ ಎಂಬುವವರು ವಿಭಿನ್ನವಾಗಿ ತಮ್ಮ ಭಕ್ತಿಯನ್ನು ಪ್ರದರ್ಶಿಸಿದ್ದಾರೆ.
ಬೆಂಗಳೂರಿನ ಜಿಗಣಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ: ಹಿರೇಬೈಲ್ ನ ಶ್ರೇಯಾಂಸ್ ಜೈನ್ ಎಂಬುವವರು ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಶ್ರೇಯಾಂಸ್ ಅವರಿಗೆ ಜಾನುವಾರುಗಳೆಂದರೆ ಅಚ್ಚುಮೆಚ್ಚು. ಉಜಿರೆ ಎಸ್.ಡಿ.ಎಂ. ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದ ಇವರು, ಸಿದ್ಧವನ ಗುರುಕುಲದಲ್ಲಿ ಶಿಕ್ಷಣ ಪಡೆಯುತ್ತಿರುವಾಗಲೇ ಆಕಳು ಪ್ರೇಮ ಚಿಗುರೊಡೆದಿತ್ತು.
ಕರುವನ್ನು ಮಂಜುನಾಥನ ಸನ್ನಿಧಿಗೆ ಅರ್ಪಿಸುವ ಸಂಕಲ್ಪ: ಇನ್ನು ಬೆಂಗಳೂರಿನ ಜಿಗಣಿಯಲ್ಲಿದ್ದಾಗ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿರುವಾಗ ಹೈನುಗಾರಿಕೆಯತ್ತ ಆಸಕ್ತಿ ಮೂಡುತ್ತದೆ. ಅದೇ ರೀತಿ ತಮ್ಮ ಬಾಡಿಗೆ ಮನೆಯ ಬಳಿ ಇದ್ದ ಖಾಲಿ ಜಾಗದಲ್ಲಿ ಗಿರ್ ತಳಿಯ ಹಸುವನ್ನು ಸಾಕಲು ಪ್ರಾರಂಭಿಸುತ್ತಾರೆ. ಜೊತೆಗೆ ಇದರ ಮೊದಲ ಕರುವನ್ನು ಧರ್ಮಸ್ಥಳ ಮಂಜುನಾಥ ಸನ್ನಿಧಿಗೆ ಅರ್ಪಿಸುವ ಬಗ್ಗೆ ಸಂಕಲ್ಪ ಮಾಡುತ್ತಾರೆ.