ಕಡಬ: ತಾಲೂಕಿನ ಪೊಲೀಸ್ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದ ನೀಡೇಲು ಎಂಬಲ್ಲಿ ಯುವಕನೊಬ್ಬ ಕುಮಾರಧಾರ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ.
ನಾಪತ್ತೆಯಾದ ಯುವಕನನ್ನು ಕೊಯಿಲ ಗ್ರಾಮದ ಗುಲ್ಗೋಡಿ ನಿವಾಸಿ ರತ್ನಾಕರ ಕುಮಾರ್(ಉದಯ ಪೂಜಾರಿ) (32) ಎಂದು ಗುರುತಿಸಲಾಗಿದೆ. ಈ ಬಗ್ಗೆ ದೂರು ನೀಡಿರುವ ರತ್ನಾಕರ ಕುಮಾರ್ ಅವರ ಪತ್ನಿ ಚೈತ್ರಾ, ತನ್ನ ಪತಿ ನದಿಯಲ್ಲಿ ಸ್ನಾನಕ್ಕಿಳಿದಾಗ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ ದೂರಿನಲ್ಲಿ ತಿಳಿಸಿದ್ದಾರೆ.
ಗುರುವಾರ ಸಂಜೀವ ಪೂಜಾರಿ ಮಾರಂಗ, ಹರೀಶ ಪಲ್ಲತ್ತಾರು, ಸತ್ಯಾ ರೈ ಸುಣ್ಣಾಡಿ, ಬೇಬಿ ಗೋಳಿತ್ತಡಿ ಅವರೊಂದಿಗೆ ಪತಿ ನದಿಗೆ ಹೋಗಿದ್ದಾರೆ. ಆ ಸಂದರ್ಭದಲ್ಲಿ ನೀರಲ್ಲಿ ಮುಳುಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಕಡಬ ಪೊಲೀಸರು ಚೈತ್ರಾ ಅವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಕಡಬ ಎಸ್‍ಐ ರುಕ್ಮ ನಾಯ್ಕ್, ಎಎಸ್‍ಐ ರವಿ ಭೇಟಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮುಳುಗು ತಜ್ಞರು ನದಿಯಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.