ಮಂಗಳೂರು: ಜನರಿಗೆ ಮನೆಯ ಕಸ ಸ್ವಚ್ಛವಾದರೆ ಸಾಕು ಎಂಬ ಮನೋಭಾವ ಇರುತ್ತದೆ. ತಮ್ಮ ಮನೆಯಲ್ಲಿರುವ ಕಸವನ್ನು ಸ್ವಚ್ಛ ಮಾಡಿ ಹೊರಗಡೆ ಎಸೆಯುವ ಚಾಳಿ ಹೆಚ್ಚಿನವರದ್ದು. ಈ ರೀತಿ ಜನ ಕಸವನ್ನು ಹೊರಗಡೆ ತೆಗೆದುಕೊಂಡು ಬಂದು ಎಸೆಯುವುದು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ. ಹೀಗೆ ಕಸ ಎಸೆಯಬೇಡಿ ಎಂದು ಮಂಗಳೂರಿನಲ್ಲಿ ಪರಿಸರ ಪ್ರೇಮಿ ಯುವಕನೊಬ್ಬ ಏಕಾಂಗಿ ಹೋರಾಟ ಮಾಡುತ್ತಿದ್ದಾರೆ. ಯುವಕ ನಾಗರಾಜ್ ಬಜಾಲ್ ಎಂಬುವರು ಬೆಂಗಳೂರು- ಮಂಗಳೂರು ಹೆದ್ದಾರಿಯಲ್ಲಿ ಕಳೆದ ನಾಲ್ಕು ತಿಂಗಳಿಂದ ಫ್ಲೆಕಾರ್ಡ್ ಹಿಡಿದುಕೊಂಡು ಏಕಾಂಗಿಯಾಗಿ ಹೋರಾಟ ನಡೆಸಿದ್ದಾರೆ.
ಹೌದು, ಬಜಾಲ್ ಪಕ್ಕಲಡ್ಕ ನಿವಾಸಿಯಾಗಿರುವ ಇವರು ಕಳೆದ ನಾಲ್ಕು ತಿಂಗಳಿಂದ ಬೆಳಗ್ಗೆ 5.30ರಿಂದ 9.30ರ ವರೆಗೆ ಅಡ್ಯಾರ್ನಲ್ಲಿ ಫ್ಲೆಕಾರ್ಡ್ ಹಿಡಿದು ಅದರಲ್ಲಿ 'ರಸ್ತೆ ಬದಿ ಕಸ ಎಸೆಯಬೇಡಿ. ಜಾಗ್ರತೆ ಪಕ್ಕದಲ್ಲೇ ನದಿ ಹರಿಯುತ್ತಿದೆ. ಕಸ ಎಸೆಯಬೇಡಿ' ಎಂಬ ಸಂದೇಶವನ್ನ ಸಾರುತ್ತಿದ್ದಾರೆ. ಈ ಹಿಂದೆ ಉಳ್ಳಾಲದ ಬಳಿಯಿರುವ ನೇತ್ರಾವತಿ ಸೇತುವೆಯ ಬಳಿ ಇದೇ ರೀತಿ ಕಾರ್ಡ್ ಹಿಡಿದು ಜಾಗೃತಿ ಮೂಡಿಸಿ ಅಲ್ಲಿ ತ್ಯಾಜ್ಯ ರಾಶಿ ಬೀಳುವುದನ್ನು ನಾಗರಾಜ್ ತಪ್ಪಿಸಿದ್ದರು. ಅಡ್ಯಾರ್ ಹೆದ್ದಾರಿ ಬದಿಯಲ್ಲಿ ತ್ಯಾಜ್ಯ ಬೀಳುತ್ತಿದ್ದರಿಂದ ಅದನ್ನು ತಪ್ಪಿಸಲು ಹಿಂದಿನ ಮಾರ್ಗವನ್ನೇ ಇವರು ಅನುಸರಿಸಿದ್ದಾರೆ. ಇದರಲ್ಲೂ ಅವರು ಯಶಸ್ವಿಯಾಗಿದ್ದಾರೆ.