ಕರ್ನಾಟಕ

karnataka

ETV Bharat / state

ಮಂಗಳೂರು ಗೋಲಿಬಾರ್‌ಗೆ ಇಂದಿಗೆ ಒಂದು ವರ್ಷ..

ಈ ಅವಧಿಯಲ್ಲಿ ಒಟ್ಟು 14 ಬಾರಿ ವಿಚಾರಣೆ ನಡೆದಿದ್ದು,‌ ಅಂದಿನ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ ಎಸ್ ಹರ್ಷ, ಉಪ ಪೊಲೀಸ್ ಆಯುಕ್ತ ಅರುಣಾಂಗ್ಶು ಗಿರಿ ಸೇರಿದಂತೆ ಅನೇಕ ಪೊಲೀಸರು ಹಾಗೂ ಗೋಲಿಬಾರ್ ಘಟನೆಯ ಪ್ರತ್ಯಕ್ಷ ಸಾಕ್ಷಿಗಳು ಸೇರಿ ಸುಮಾರು 114 ಸಾಕ್ಷಿಗಳ ಹೇಳಿಕೆ ಪಡೆಯಲಾಗಿತ್ತು. ದಾಖಲೆಗಾಗಿ ಅಂದಿನ ಘಟನೆಯ ವಿಡಿಯೋ ದೃಶ್ಯ ಸಾಕ್ಷ್ಯಾಧಾರ ಸಹಿತ ಲಿಖಿತ ಹೇಳಿಕೆಗಳನ್ನು ತನಿಖಾ ತಂಡ ಸಾಕ್ಷಿಯಾಗಿ ಪಡೆದಿತ್ತು..

a-year-completed-for-mangalore-golibar-issue
ಮಂಗಳೂರು ಗೋಲಿಬಾರ್ ಗೆ ಇಂದಿಗೆ ಒಂದು ವರ್ಷ....

By

Published : Dec 19, 2020, 10:44 AM IST

Updated : Dec 19, 2020, 11:58 AM IST

ಮಂಗಳೂರು :ನಗರದಲ್ಲಿ ಪೌರತ್ವ ಕಾಯ್ದೆ ಜಾರಿ ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ಗೋಲಿಬಾರ್ ನಡೆದು ಇಬ್ಬರು ಮೃತಪಟ್ಟ ಪ್ರಕರಣ ನಡೆದು ಇಂದಿಗೆ ಒಂದು ವರ್ಷ ತುಂಬಿದೆ. ಘಟನೆಯಲ್ಲಿ ನಗರದ ಕಂದಕ್ ನಿವಾಸಿ ಜಲೀಲ್ ಕರೋಪಾಡಿ ಹಾಗೂ ಕುದ್ರೋಳಿಯ ನೌಶೀನ್ ಪೊಲೀಸ್ ಗುಂಡಿಗೆ ಬಲಿಯಾಗಿದ್ದರು.

ಮಂಗಳೂರಿನಲ್ಲಿ 2019, ಡಿ.19ರಂದು ಪೌರತ್ವ ಕಾಯ್ದೆಯನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಲು ಅವಕಾಶ ನೀಡದೆ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು‌.

ಆದರೆ, ಉದ್ರಿಕ್ತರ ಗುಂಪೊಂದು ಪ್ರತಿಭಟನೆ ನಡೆಸಲು ಯತ್ನಿಸಿತ್ತು. ಪೊಲೀಸರು ಉದ್ರಿಕ್ತರ ಗುಂಪನ್ನು ಚದುರಿಸಲು ಲಾಠಿಚಾರ್ಜ್ ನಡೆಸಿದ್ದು, ಪ್ರತಿಭಟನೆ ಹಿಂಸಾರೂಪ ತಾಳಿತ್ತು. ಪರಿಣಾಮ ಪೊಲೀಸರು ಹಾರಿಸಿದ ಗುಂಡಿಗೆ ಇಬ್ಬರು ಬಲಿಯಾಗಿದ್ದರು.

ಓದಿ:ಮಂಗಳೂರು ಹಿಂಸಾಚಾರದಲ್ಲಿ ಕಲ್ಲು ತೂರಾಟ: ವಿಡಿಯೋ ಬಿಡುಗಡೆ ಮಾಡಿದ ಪೊಲೀಸ್ರು

ಒಬ್ಬನ ಕಣ್ಣಿಗೆ ಗುಂಡೇಟು ಬಿದ್ದರೆ, ಮತ್ತೊಬ್ಬನ ಬೆನ್ನಿಗೆ ಗುಂಡೇಟು ಬಿದ್ದಿತ್ತು. ತಕ್ಷಣ ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಯಿತಾದ್ರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಅಲ್ಲದೆ ಈ ಘಟನೆಯಲ್ಲಿ ಮಾಜಿ ಮೇಯರ್ ಅಶ್ರಫ್, ಪೊಲೀಸರು ಸಹಿತ ಹಲವರು ಗಾಯಗೊಂಡಿದ್ದರು. ಇನ್ನು ಪ್ರತಿಭಟನೆಗೆ ಯತ್ನಿಸಿದರೆನ್ನಲಾದ ಹಲವರನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

ಈ ಘಟನೆ ರಾಷ್ಟ್ರಮಟ್ಟದಲ್ಲಿ ಬಹುದೊಡ್ಡ ಸುದ್ದಿಯಾಗಿತ್ತು. ಘಟನೆಯ ಬಗ್ಗೆ ಪರ-ವಿರೋಧದ ಮಾತುಗಳು ಕೇಳಿ ಬಂದಿತ್ತು. ರಾಜ್ಯ ಸರ್ಕಾರ ಗೋಲಿಬಾರ್‌ಗೆ ಬಲಿಯಾದ ಕುಟುಂಬದವರಿಗೆ ಮೊದಲಿಗೆ ಪರಿಹಾರ ಘೋಷಿಸಿತ್ತಾದ್ರೂ ಬಳಿಕ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಮೃತರು ಭಾಗವಹಿಸಿದ್ದರೆಂದು ಪರಿಹಾರದ ಮೊತ್ತ ನೀಡಿರಲಿಲ್ಲ. ಅಲ್ಲದೆ ಘಟನೆಯ ಬಗ್ಗೆ ಕೂಲಂಕಷವಾದ ವರದಿ ನೀಡಬೇಕೆಂದು ಮಾಜಿಸ್ಟ್ರೇಟ್ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು.

ಮ್ಯಾಜಿಸ್ಟ್ರೇಟ್ ತನಿಖೆಗೆ ಉಡುಪಿಯ ಜಿಲ್ಲಾಧಿಕಾರಿ ಜಗದೀಶ್ ಜಿ. ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿ ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಆದೇಶಿಸಿತ್ತು. ಆರಂಭದಲ್ಲಿ ತನಿಖೆ ವೇಗ ಪಡೆದಿದ್ದರೂ, ಆ ಬಳಿಕ ಕೊರೊನಾ ತನಿಖೆಗೆ ಅಡ್ಡಿಯಾಯಿತು. ಹಾಗಾಗಿ ತನಿಖೆಯ ಅವಧಿಯನ್ನು ಮತ್ತೆ ಮೂರು ತಿಂಗಳಿಗೆ ವಿಸ್ತರಣೆ ಮಾಡಲಾಯಿತು.

ಈ ಅವಧಿಯಲ್ಲಿ ಒಟ್ಟು 14 ಬಾರಿ ವಿಚಾರಣೆ ನಡೆದಿದ್ದು,‌ ಅಂದಿನ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ ಎಸ್ ಹರ್ಷ, ಉಪ ಪೊಲೀಸ್ ಆಯುಕ್ತ ಅರುಣಾಂಗ್ಶು ಗಿರಿ ಸೇರಿದಂತೆ ಅನೇಕ ಪೊಲೀಸರು ಹಾಗೂ ಗೋಲಿಬಾರ್ ಘಟನೆಯ ಪ್ರತ್ಯಕ್ಷ ಸಾಕ್ಷಿಗಳು ಸೇರಿ ಸುಮಾರು 114 ಸಾಕ್ಷಿಗಳ ಹೇಳಿಕೆ ಪಡೆಯಲಾಗಿತ್ತು. ದಾಖಲೆಗಾಗಿ ಅಂದಿನ ಘಟನೆಯ ವಿಡಿಯೋ ದೃಶ್ಯ ಸಾಕ್ಷ್ಯಾಧಾರ ಸಹಿತ ಲಿಖಿತ ಹೇಳಿಕೆಗಳನ್ನು ತನಿಖಾ ತಂಡ ಸಾಕ್ಷಿಯಾಗಿ ಪಡೆದಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಾಜಿಸ್ಟ್ರೇಟ್ ತನಿಖೆ ಸಂಪೂರ್ಣಗೊಂಡು ಎರಡುವರೆ ಸಾವಿರ ಪುಟಗಳ ವರದಿ ತಯಾರಾಗಿದೆ. ಈ ವರದಿಯಲ್ಲಿ ಆ ಘಟನೆ ಹಾಗೂ ಗೋಲಿಬಾರ್‌ಗೆ ಕಾರಣವಾದ ಸನ್ನಿವೇಶಗಳ‌ ಕುರಿತು ಸವಿವರವಾಗಿ ಉಲ್ಲೇಖಿಸಿದ ವರದಿಯನ್ನ ಅಂತಿಮಗೊಳಿಸಿ ತನಿಖಾಧಿಕಾರಿ ಜಗದೀಶ್ ಜಿ ಅವರು ರಾಜ್ಯ ಗೃಹ ಇಲಾಖೆಯ ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಸಿದ್ದಾರೆ.

Last Updated : Dec 19, 2020, 11:58 AM IST

ABOUT THE AUTHOR

...view details