ಕರ್ನಾಟಕ

karnataka

ETV Bharat / state

ಸಮಸ್ಯೆ ಹೇಳಿಕೊಂಡು ಕಣ್ಣೀರಿಟ್ಟ ಮಹಿಳೆ; ಅಧಿಕಾರಿಗಳಿಗೆ ಚಳಿ ಬಿಡಿಸಿದ ಲೋಕಾಯುಕ್ತ ಎಸ್​ಪಿ - ಅಹವಾಲು ಸ್ವೀಕಾರ ಕಾರ್ಯಕ್ರಮ

ಕಡಬದಲ್ಲಿ ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಅಧಿಕಾರಿಗಳಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು.

ಲೋಕಾಯುಕ್ತ ಎಸ್ಪಿ ಮುಂದೆ ಕಣ್ಣೀರಿಟ್ಟ ಮಹಿಳೆ
ಲೋಕಾಯುಕ್ತ ಎಸ್ಪಿ ಮುಂದೆ ಕಣ್ಣೀರಿಟ್ಟ ಮಹಿಳೆ

By ETV Bharat Karnataka Team

Published : Dec 14, 2023, 8:01 AM IST

Updated : Dec 14, 2023, 11:47 AM IST

ಸಮಸ್ಯೆ ಹೇಳಿಕೊಂಡು ಲೋಕಾಯುಕ್ತ ಅಧಿಕಾರಿ ಮುಂದೆ ಕಣ್ಣೀರಿಟ್ಟ ಮಹಿಳೆ

ಕಡಬ (ದಕ್ಷಿಣ ಕನ್ನಡ):ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಉಳಿಪ್ಪು ನಿವಾಸಿ ಶಿಬು ಎಂಬವರ ಪತ್ನಿ ಸೌಮ್ಯ ಅವರು ಅಕ್ರಮ ಸಕ್ರಮ ಕಡತ ವಿಲೇವಾರಿಯಲ್ಲಿ ಅಧಿಕಾರಿಗಳಿಂದ ಆಗಿರುವ ಅನ್ಯಾಯವನ್ನು ಲೋಕಾಯುಕ್ತ ಅಧಿಕಾರಿಗಳ ಮುಂದೆ ಹೇಳಿ ಕಣ್ಣೀರಿಟ್ಟ ಪ್ರಸಂಗ ನಡೆದಿದೆ. ಇದರಿಂದ ಕೆಂಡಾಮಂಡಲರಾದ ಲೋಕಾಯುಕ್ತ ಎಸ್ಪಿ ಸೈಮನ್ ಅವರು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಅಧಿಕಾರಿಗಳಿಂದ ಕಡಬ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ, ಸೌಮ್ಯ ಕಳೆದ ಎಂಟು ವರ್ಷಗಳಿಂದ ನಮ್ಮ ಅಕ್ರಮ ಸಕ್ರಮ ಕಡತವನ್ನು ವಿಲೇವಾರಿ ಮಾಡದೆ ವಿನಾಕಾರಣ ಸತಾಯಿಸುತ್ತಿದ್ದಾರೆ. ಕಳೆದ ವರ್ಷ ಕುಟ್ರುಪ್ಪಾಡಿಯಲ್ಲಿ ನಡೆದ ಜಿಲ್ಲಾಧಿಕಾರಿಯವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ನಾವು ದೂರು ನೀಡಿದಾಗ ಒಂದು ವಾರದೊಳಗೆ ಕಡತ ವಿಲೇವಾರಿ ಮಾಡಿ ಹಕ್ಕು ಪತ್ರ ನೀಡಬೇಕೆಂದು ಕಂದಾಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ಸೂಚನೆ ನೀಡಿದ್ದರು. ಆದರೆ ಈವರೆಗೆ ಯಾವ ಪ್ರಕ್ರಿಯೆಯೂ ನಡೆದಿಲ್ಲ ಎಂದು ಅಳಲು ತೋಡಿಕೊಂಡರು.

ತನಗೆ ಕಳೆದ ಎಂಟು ವರ್ಷಗಳಿಂದ ಅನ್ಯಾಯ ಮಾಡಲಾಗುತ್ತಿದೆ ಎಂದು ಲೋಕಾಯುಕ್ತ ಅಧಿಕಾರಿಗಳ ಎದುರು ಕಣ್ಣೀರಿಟ್ಟು ಸೌಮ್ಯ ತನ್ನ ಸಮಸ್ಯೆಯನ್ನು ಹೇಳಿಕೊಂಡರು. ಇದರಿಂದ ಕೆಂಡಾಮಂಡಲರಾದ ಲೋಕಾಯುಕ್ತ ಅಧಿಕಾರಿಗಳು ಸ್ಥಳದಲ್ಲಿದ್ದ ತಹಶೀಲ್ದಾರ್, ಉಪತಹಶೀಲ್ದಾರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು, 15 ದಿನಗಳ ಒಳಗೆ ಆ ಕಡತ ವಿಲೇವಾರಿ ಮಾಡಿಕೊಡುವಂತೆ ಸೂಚನೆ ನೀಡಿದರು. ಕಡತ ವಿಲೇವಾರಿ ಆಗದಿದ್ದರೆ ತಮ್ಮ ಗಮನಕ್ಕೆ ತರುವಂತೆ ಸೌಮ್ಯ ಅವರಿಗೆ ಅಭಯ ನೀಡಿದರು.

ಇದೇ ಸಮಯದಲ್ಲಿ, ಸಾರ್ವಜನಿಕರಿಗೆ ಯಾವುದೇ ಅಧಿಕಾರಿಗಳು ಸರಿಯಾಗಿ ಸ್ಪಂದನೆ ನೀಡದೆ ಅಧಿಕಾರ ನಡೆಸಿದರೆ, ಸರ್ಕಾರಿ ಸವಲತ್ತುಗಳನ್ನು ದೊರಕಿಸಿಕೊಡುವಲ್ಲಿ ವಿನಕಾರಣ ತೊಂದರೆ ನೀಡಿದಲ್ಲಿ, ಅಧಿಕಾರಿಗಳು ಸಾರ್ವಜನಿಕರಿಗೆ ಸರ್ಕಾರಿ ಕೆಲಸದಲ್ಲಿ ತೊಂದರೆ ನೀಡಿದರೆ, ಲೋಕಾಯುಕ್ತಕ್ಕೆ ದೂರು ನೀಡಬಹುದು. ದೂರು ಯೋಗ್ಯವಾಗಿದ್ದಲ್ಲಿ ವಿಚಾರಣೆಗೆ ಒಳಪಡಿಸಲಗುವುದು ಎಂದು ಹೇಳಿದರು. ಅದೇ ರೀತಿ ಜನರು ಕೂಡಾ ಹೆಚ್ಚಿನ ಸ್ಪಂದನೆ ಕೊಡಬೇಕು. ಈ ಕಾರ್ಯಕ್ರಮದಲ್ಲಿ ಕೇವಲ ಐದು ದೂರುಗಳು ಮಾತ್ರ ಬಂದಿವೆ. ಅವುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ವರ್ಗಾಯಿಸಿ ಮುಂದಿನ ಕ್ರಮ ಕೈಗೊಳ್ಳಗಾವುದು ಎಂದು ಹೇಳಿದರು.

ಇನ್ಮುಂದೆ ಯಾವುದೇ ಅಧಿಕಾರಿಯಿಂದ ತೊಂದರೆಯಾದರೆ ಸಾರ್ವಜನಿಕರು ತಕ್ಷಣ ಲೋಕಾಯುಕ್ತಕ್ಕೆ ನೇರವಾಗಿ ದೂರು ನೀಡಬಹುದು, ಎಲ್ಲಾ ದೂರುಗಳಿಗೆ ಸಾಧ್ಯವಾದಷ್ಟು ಸ್ಪಂದಿಸಿ ಮುಂದೆ ಸೂಕ್ತ ಕ್ರಮ ಜರಗಿಸಲು ಲೋಕಾಯುಕ್ತ ಅಧಿಕಾರಿಗಳು ಬದ್ಧರಾಗಿದ್ದಾರೆ ಎಂದರು.

ಸೀತಾರಾಮ ನಾಯ್ಕ್ ಹಾಗೂ ವೆಂಕಟ್‌ರಾಜ್ ಕೋಡಿಬೈಲು ದೂರು ನೀಡಿ, ಕಡಬದಲ್ಲಿ ಕೆರೆ ಒತ್ತುವರಿ ಮಾಡಿಕೊಂಡು ಸಾರ್ವಜನಿಕರಿಗೆ ನಡೆದಾಡಲು ದಾರಿ ಇಲ್ಲದಂತೆ ಮಾಡಲಾಗಿದೆ. ನಮಗೆ ನ್ಯಾಯ ಒದಗಿಸಬೇಕೆಂದು ವಿನಂತಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಲೋಕಾಯುಕ್ತ ಅಧಿಕಾರಿಗಳು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿ ತಕ್ಷಣ ಕೆರೆ ಒತ್ತುವರಿ ತೆರವುಗೊಳಿಸಿ, ರಸ್ತೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕೆಂದರು.

ಈ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್‌ಪಿಗಳಾದ ಗಾನಾ ಪಿ.ಕುಮಾರ್, ಚೆಲುವರಾಜ್, ಕಡಬ ತಹಶೀಲ್ದಾರ್ ಪ್ರಭಾಕರ್​ ಖಜೂರೆ, ಉಪತಹಶೀಲ್ದಾರ್​ಗಳಾದ ಮನೋಹರ್ ಕೆ.ಟಿ, ಗೋಪಾಲ್ ಕಲ್ಲುಗುಡ್ಡೆ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಭವಾನಿಶಂಕರ್, ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ, ಕಂದಾಯ ನಿರೀಕ್ಷಕ ಪೃಥ್ವಿರಾಜ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ಮತ್ತೆ ನ್ಯಾಯಾಲಯ ಕಲಾಪಕ್ಕೆ ಅಡ್ಡಿಪಡಿಸಿದ ಕಿಡಿಗೇಡಿಗಳು: ಈ ಬಾರಿ ಕೆಎಟಿ ಕೋರ್ಟ್​ನ ಸರದಿ

Last Updated : Dec 14, 2023, 11:47 AM IST

ABOUT THE AUTHOR

...view details