ಬಂಟ್ವಾಳ: ನಾಳೆ ಪರೀಕ್ಷೆ ಬರೆಯಬೇಕಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಗ್ಗೆ ಬಂಟ್ವಾಳ ತಾಲೂಕಿನ ಬಾಳ್ತಿಲ ಎಂಬಲ್ಲಿ ನಡೆದಿದೆ. ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವೈಷ್ಣವಿ (17) ಸಾವನ್ನಪ್ಪಿದ ಬಾಲಕಿ. ಶಿಕ್ಷಕ ದಂಪತಿಗಳಾದ ಚಂದ್ರಶೇಖರ ಮತ್ತು ಸೌಮ್ಯಾ ಅವರ ಮೂವರು ಮಕ್ಕಳಲ್ಲಿ ಮೊದಲನೆಯವಳಾದ ವೈಷ್ಣವಿ ಬೆಳಗ್ಗೆ ಸುಮಾರು 10 ಗಂಟೆಯ ಆಸುಪಾಸಿನಲ್ಲಿ ಈ ಕೃತ್ಯವೆಸಗಿದ್ದಾಗಿ ಸಂಶಯಿಸಲಾಗಿದೆ. ದಿಢೀರನೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದು ಇನ್ನೂ ಪತ್ತೆಯಾಗಿಲ್ಲ.
ವೈಷ್ಣವಿಯ ತಾಯಿ ಸೌಮ್ಯಾ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶಿಕ್ಷಕಿಯಾಗಿದ್ದರೆ, ತಂದೆ ಚಂದ್ರಶೇಖರ್ ಅವರು ರಾಮಕುಂಜದಲ್ಲಿ ಶಿಕ್ಷಕರಾಗಿದ್ದಾರೆ. ಇವರಿಗೆ ಇಬ್ಬರು ತಂಗಿಯರಿದ್ದು, ಇಬ್ಬರೂ ಶ್ರೀರಾಮ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿನಿಯಾದ ವೈಷ್ಣವಿ, ಪಿಯುಸಿಯಲ್ಲಿ ಕಾಮರ್ಸ್ ಕಲಿಯುತ್ತಿದ್ದು, ಆಕೆಯ ಪರೀಕ್ಷೆ ನಾಳೆ ನಿಗದಿಯಾಗಿತ್ತು. ಪರೀಕ್ಷೆಯ ಸಿದ್ಧತೆಯಲ್ಲಿದ್ದ ವೈಷ್ಣವಿ ಬೆಳಗ್ಗೆ ತಾಯಿ ಜೊತೆ ಶಾಲೆಗೆ ಹೋಗಿ ಮರಳಿದ್ದಳು. ಎಂದಿನಂತೆ ತಾಯಿ ಮಗಳಿಗೆ ಕರೆ ಮಾಡಿದ್ದು, ಹಲವು ಕರೆಗಳಾದರೂ ಸ್ವೀಕರಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ನೆರೆಮನೆಯವರಿಗೆ ತಾಯಿ ಕರೆ ಮಾಡಿದ್ದಾರೆ. ನೆರೆಮನೆಯವರು ಮನೆಗೆ ತೆರಳಿದಾಗ ವಿಷಯ ಗೊತ್ತಾಗಿದೆ. ಕೂಡಲೇ ಮನೆಯವರಿಗೆ ವಿಷಯ ತಿಳಿಸಿದ್ದು, ಬಾಲಕಿಯನ್ನು ಕಲ್ಲಡ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅದಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಬಾಲಕಿ ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಕ್ಕೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ.
ಇವರು ಕಾಮರ್ಸ್ ವಿಭಾಗದಲ್ಲಿ ಓದುತ್ತಿದ್ದ ಕಾರಣ, ಇಂಜಿನಿಯರ್, ವೈದ್ಯೆಯಾಗುವ ಒತ್ತಡಗಳು, ಸಿಇಟಿಯಂಥ ಕೋಚಿಂಗ್ ಒತ್ತಡಗಳು ಇವರಿಗೆ ಇರಲಿಲ್ಲ. ಜತೆಗೆ ತಾನಾಯಿತು. ಮನೆಯಾಯಿತು ಎಂಬಂತೆ ಹೋಗಿ ಬರುತ್ತಿದ್ದ ಇವರು ದಿಢೀರನೇ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕಾರಣ ನಿಗೂಢವಾಗಿದೆ.