ಸುಳ್ಯ (ದಕ್ಷಿಣ ಕನ್ನಡ):ತಾಲೂಕಿನ ಗುತ್ತಿಗಾರು ಸಮೀಪ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರು ಧ್ವಜ ಸ್ತಂಭದ ಬಳಿ ನಿಂತು ಆರೋಹಣಗೊಂಡಿದ್ದ ಧ್ವಜಕ್ಕೆ ಸೆಲ್ಯೂಟ್ ಹೊಡೆದಿರುವ ಫೋಟೊ ಇದೀಗ ಎಲ್ಲೆಡೆ ವೈರಲ್ ಆಗಿದೆ. ಮಹಿಳೆಯ ರಾಷ್ಟ್ರಪ್ರೇಮಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಗುತ್ತಿಗಾರು ಗ್ರಾಮದ ಮೊಗ್ರ ಏರಣಗುಡ್ಡೆಯಲ್ಲಿ ಗಾಂಧಿ ವಿಚಾರ ವೇದಿಕೆಯ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ನಡೆದಿತ್ತು. ಧ್ವಜಾರೋಹಣ ನಡೆಸಿ ಅತಿಥಿಗಳು ತೆರಳಿದ್ದರು. ಕಾರ್ಯಕ್ರಮದ ಸಂಘಟಕರಲ್ಲಿ ಕೆಲವರು ಅಲ್ಲಿಯೇ ಸಮೀಪ ಮಾತುಕತೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಕೂಲಿ ಕೆಲಸಕ್ಕೆ ಕತ್ತಿ ಸಹಿತವಾಗಿ ತೆರಳುತ್ತಿದ್ದ ಪರಮೇಶ್ವರಿ ಎಂಬವರು, ನೇರವಾಗಿ ಧ್ವಜ ಸ್ತಂಭದ ಬಳಿಗೆ ಆಗಮಿಸಿ ಚಪ್ಪಲಿ ತೆಗೆದು ಧ್ವಜ ವಂದನೆ ಮಾಡಿದ್ದಾರೆ. ಬಳಿಕ ಕೆಲಸಕ್ಕೆ ತೆರಳಿದ್ದಾರೆ.