ಬಂಟ್ವಾಳ (ದಕ್ಷಿಣ ಕನ್ನಡ): ಚೀಲದಲ್ಲಿ ಕೋಳಿ ಮಾಂಸ ಹಿಡಿದುಕೊಂಡು ಕೆಎಸ್ಆರ್ಟಿಸಿ ಬಸ್ ಹತ್ತಿದ ಪ್ರಯಾಣಿಕನನ್ನು ಕೆಳಗಿಳಿಸಲು ನೇರವಾಗಿ ಬಸ್ಸನ್ನು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ತೆಗೆದುಕೊಂಡ ಹೋದ ಘಟನೆ ನಡೆದಿದೆ.
ಕೋಳಿ, ಮೀನು ಮಾಂಸ ಬಸ್ನಲ್ಲಿ ಸಾಗಿಸವಂತಿಲ್ಲ ಎಂಬ ನಿಯಮವಿದೆ. ಆದರೆ ಇದು ಹೆಚ್ಚಿನ ಪ್ರಯಾಣಿಕರಿಗೆ ಗೊತ್ತಿರುವುದಿಲ್ಲ. ಒಂದು ವೇಳೆ ತಂದರೂ ಅದನ್ನು ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಳ್ಳುವವರು ಕಡಿಮೆ. ಆದರೆ ಪುತ್ತೂರು ಬಸ್ಸಿಗೆ ತುಂಬೆಯಲ್ಲಿ ಸುರೇಶ್ ಎಂಬುವರು ಕೋಳಿ ಮಾಂಸ ಇದ್ದ ಚೀಲವನ್ನು ತೆಗೆದುಕೊಂಡು ಹತ್ತಿದ್ದಾರೆ. ನಿರ್ವಾಹಕ ಚೀಲದಲ್ಲೇನು ಎಂದು ಕೇಳಿದಾಗ ಇದು ಕೋಳಿಮಾಂಸ ಎಂದು ಸುರೇಶ್ ಹೇಳಿದ್ದಾರೆ.
ಆಗ ನಿರ್ವಾಹಕ, ಬಸ್ಸಿನಲ್ಲಿ ಮಾಂಸ ಸಾಗಿಸುವಂತಿಲ್ಲ ಎಂಬ ನಿಯಮವಿದೆ. ಆದ್ದರಿಂದ ಬಸ್ಸಿನಿಂದ ಕೆಳಗಿಳಿಯುವಂತೆ ಪ್ರಯಾಣಿಕನಿಗೆ ಹೇಳಿದ್ದಾರೆ. ಈ ಸಂದರ್ಭದಲ್ಲಿ ನಿಯಮಪಾಲನೆ ಕುರಿತು ನಿರ್ವಾಹಕ, ಪ್ರಯಾಣಿಕನ ಮಧ್ಯೆ ಮಾತಿಕ ಚಕಮಕಿ ನಡೆದಿದೆ. ಆದರೂ ಪ್ರಯಾಣಿಕ ಬಸ್ಸಿನಿಂದ ಇಳಿಯದ ಹಿನ್ನೆಲೆಯಲ್ಲಿ ಹಲವು ಪ್ರಯಾಣಿಕರಿದ್ದ ಬಸ್ಸನ್ನು ನೇರವಾಗಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.
ಬಂಟ್ವಾಳ ಪೊಲೀಸ್ ಠಾಣೆಗೆ ಬಸ್: ಪ್ರಯಾಣಿಕ ಬಸ್ಸಿನಿಂದ ಕೆಳಗಿಳಿಯದ ಕಾರಣ ನೇರವಾಗಿ ಚಾಲಕ. ನಿರ್ವಾಹಕ ಬಂಟ್ವಾಳ ಪೊಲೀಸ್ ಠಾಣೆಗೆ ಬಸ್ ಜೊತೆ ಬಂದರು. ಬಳಿಕ ಪೊಲೀಸರ ಮಧ್ಯಸ್ಥಿಕೆಯಲ್ಲಿ ಪ್ರಯಾಣಿಕ ಸುರೇಶ್ ಅವರನ್ನು ಕೆಳಗಿಳಿಸಲಾಯಿತು. ಈ ಮೂಲಕ ಪ್ರಕರಣ ಸುಖಾಂತ್ಯವಾಯಿತು.