ಕರ್ನಾಟಕ

karnataka

ETV Bharat / state

ಬಿಜೆಪಿ ರಾಜ್ಯಾಧ್ಯಕ್ಷರ ತವರಿನಲ್ಲಿ ಬಿಜೆಪಿಗೆ ಬಂಡಾಯದ ಬಿಸಿ; ಬಿಜೆಪಿ ಅಧಿಕೃತ ಅಭ್ಯರ್ಥಿ ವಿರುದ್ಧ ಹಿಂದೂ ಮುಖಂಡನ ಸ್ಪರ್ಧೆ - ಪುತ್ತೂರು

ಬಿಜೆಪಿಯ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಬಿಜೆಪಿಯ ವಿರುದ್ಧವೇ ಫೈಟ್​ ಶುರುವಾಗಿದೆ.

arun putthila, asha timmappa
ಅರುಣ್​ ಪುತ್ತಿಲ, ಆಶಾ ತಿಮ್ಮಪ್ಪ

By

Published : Apr 17, 2023, 10:41 AM IST

ಪುತ್ತೂರು(ದಕ್ಷಿಣ ಕನ್ನಡ): ಬಿಜೆಪಿಯ ಹೊಸ ಪ್ರಯೋಗದಿಂದ ರಾಜ್ಯದ ವಿವಿಧೆಡೆ ಕಮಲಪಾಳೆಯದಲ್ಲಿ ಗೊಂದಲಗಳು, ಬಂಡಾಯಗಳು ಇದೀಗ ಸಾಮಾನ್ಯವಾಗಿ ಬಿಟ್ಟಿದೆ. ಕರಾವಳಿಯಲ್ಲಿ ಬಿಜೆಪಿ ಹೊಸ‌ಪ್ರಯೋಗ ಆರಂಭದಲ್ಲಿ ಗೊಂದಲ ಸೃಷ್ಟಿಸಿದರೂ ಅದು ಬಳಿಕ ಸರಿಯಾಗಿದೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತವರು ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿಗೆ ಹೊಸ ತಲೆ ನೋವು ಆರಂಭವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಿಜೆಪಿಯ ಭದ್ರಕೋಟೆ. ಹಿಂದೂ ಸಂಘಟನೆಗಳ ಪ್ರಾಬಲ್ಯವಿರುವ ಪುತ್ತೂರಿನಲ್ಲಿ ಬಿಜೆಪಿ ಗೆಲುವಿನ ವಿಶ್ವಾಸದಲ್ಲಿದೆ. ಕಳೆದ ಬಾರಿ ಬಿಜೆಪಿ ಗೆದ್ದ ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಹೈಕಮಾಂಡ್ ಹಾಲಿ ಶಾಸಕರಿಗೆ ಟಿಕೆಟ್ ನೀಡದೆ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಹೌದು ಈ ಬಾರಿ ಚುನಾವಣೆಗೆ ಪುತ್ತೂರು ಕ್ಷೇತ್ರದಲ್ಲಿ ಆಶಾ ತಿಮ್ಮಪ್ಪ ಅವರಿಗೆ ಟಿಕೆಟ್ ನೀಡಿದೆ. ಆದರೆ ಬಿಜೆಪಿಯ ಟಿಕೆಟ್ ಘೋಷಣೆ ಕಾರ್ಯಕರ್ತರ ನಡುವೆ ಗೊಂದಲಕ್ಕೆ ಕಾರಣವಾಗಿದೆ.

ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಈ ಬಾರಿಯೂ ಟಿಕೆಟ್​ಗೆ ಪ್ರಬಲ ಆಕಾಂಕ್ಷಿಯಾಗಿದ್ದರು. ಇದರ ನಡುವೆ ಹಿಂದೂ ಸಂಘಟನೆ ಮುಖಂಡ ಅರುಣ್ ಪುತ್ತಿಲ ಅವರು ಟಿಕೆಟ್​ಗಾಗಿ ಭಾರಿ ಪ್ರಯತ್ನ ಪಟ್ಟಿದ್ದರು. ಪುತ್ತೂರಿಗೆ ಪುತ್ತಿಲ ಎಂಬ ಅಭಿಯಾನವನ್ನು ಮಾಡಿ ಟಿಕೆಟ್​ಗಾಗಿ ಭಾರಿ ಪ್ರಯತ್ನ ನಡೆಸಿದ್ದರು. ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಶಾ ಅವರು ಪುತ್ತೂರಿಗೆ ಬಂದ ಸಂದರ್ಭದಲ್ಲಿ ಅರುಣ್ ಪುತ್ತಿಲ ಅವರಿಗೆ ಟಿಕೆಟ್ ನೀಡುವಂತೆ ಭಾರಿ ಒತ್ತಡವನ್ನು ಹಾಕಲಾಗಿತ್ತು.

ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ. ಹಿಂದೂ ಕಾರ್ಯಕರ್ತರನ್ನು ಪ್ರತಿನಿಧಿಸಿ ಅರುಣ್ ಪುತ್ತಿಲ ಅವರಿಗೆ ಟಿಕೆಟ್ ನೀಡುವಂತೆ ಭಾರಿ ಒತ್ತಡಗಳು ಸೃಷ್ಟಿಯಾಗಿತ್ತು. ಅರುಣ್ ಕುಮಾರ್ ಪುತ್ತಿಲ ಪ್ರಯತ್ನಕ್ಕೆ ಶಾಸಕ ಸಂಜೀವ ಮಠಂದೂರು ಮಳೆಗಾಲದಲ್ಲಿ ಬರುವ ಅಣಬೆಗಳಂತೆ ಎಂಬ ನೀಡಿದ ಹೇಳಿಕೆ ಬಳಿಕ ಸಂಜೀವ ಮಠಂದೂರು ಮತ್ತು ಅರುಣ್ ಪುತ್ತಿಲ ಬೆಂಬಲಿಗರ ನಡುವೆ ಸಮರವನ್ನು ಕೂಡ ತಾರಕಕ್ಕೇರಿಸಿತ್ತು.

ಆದರೆ ಬಿಜೆಪಿ ಹೈಕಮಾಂಡ್ ಹಾಲಿ ಶಾಸಕ ಸಂಜೀವ ಮಠಂದೂರು ಅವರಿಗೆ ಟಿಕೆಟ್ ನೀಡದೆ ಆಶಾ ತಿಮ್ಮಪ್ಪ ಅವರಿಗೆ ಟಿಕೆಟ್ ನೀಡಿದೆ. ಇತ್ತ ಬಿಜೆಪಿ ಟಿಕೆಟ್​ಗಾಗಿ ತೀವ್ರ ಪ್ರಯತ್ನ ನಡೆಸಿದ ಅರುಣ್ ಪುತ್ತಿಲ ಅವರಿಗೂ ಟಿಕೆಟ್ ಸಿಗದೆ ಆಕ್ರೋಶ ಆರಂಭವಾಗಿದೆ. ಟಿಕೆಟ್ ಘೋಷಣೆಯ ಮರುದಿನವೇ ಪುತ್ತೂರಿನಲ್ಲಿ ಅಭಿಮಾನಿಗಳ ಸಭೆ ನಡೆಸಿದ ಅರುಣ್ ಪುತ್ತಿಲ ಅಭಿಮಾನಿಗಳ ಒತ್ತಾಯದಂತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಈ ಕಾರಣದಿಂದ ಪುತ್ತೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅರುಣ್​ ಪುತ್ತಿಲ ಸ್ಪರ್ಧಿಸಲಿದ್ದಾರೆ.

ಪುತ್ತೂರು ಕ್ಷೇತ್ರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತವರು ಕ್ಷೇತ್ರ. ಈ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದೆ. ಇದರ ಜೊತೆಗೆ ಸಾವಿರಾರು ಕಾರ್ಯಕರ್ತರು ಹಿಂದೂ ಸಂಘಟನೆಯ ಮುಖಂಡ ಅರುಣ್ ಪುತ್ತಿಲ ಜೊತೆಗೆ ಗುರುತಿಸಿಕೊಂಡಿದ್ದಾರೆ. ಈ ಕಾರಣದಿಂದ ಪುತ್ತೂರಿನಲ್ಲಿ ಅರುಣ್ ಪುತ್ತಿಲ ಸ್ಪರ್ಧೆ ಬಿಜೆಪಿಗೆ ಬಿಸಿತುಪ್ಪವಾಗಲಿದೆ.

ಅರುಣ್ ಪುತ್ತಿಲ ಅವರನ್ನು ಸ್ಪರ್ಧಾ ಕಣದಿಂದ ಹಿಂದೆ ಸರಿಸಲು ಸಾಕಷ್ಟು ಪ್ರಯತ್ನಗಳು ನಡೆದಿವೆ. ಆದರೆ ಕಾರ್ಯಕರ್ತರ ಒತ್ತಡದ ನಿರ್ಧಾರದ ಹಿನ್ನೆಲೆಯಲ್ಲಿ ಅರುಣ್ ಪುತ್ತಿಲ ಹಿಂದೆ ಸರಿಯಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸ್ಪರ್ಧೆ ಖಚಿತ ಎಂದು ಕೇಳಿಬಂದಿದೆ. ಪುತ್ತೂರಿನಲ್ಲಿ ಬಿಜೆಪಿಗೆ ಬಂಡಾಯವಾಗಿ ಅರುಣ್ ಪುತ್ತಿಲ ಸ್ಪರ್ಧೆ ಬಿಜೆಪಿಯಲ್ಲಿ ಆತಂಕವನ್ನು ಹೆಚ್ಚಿಸಿದೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಬಿಜೆಪಿಯಿಂದ ಬಂದವರು. ಬಿಜೆಪಿಯ ಮತ ಸೆಳೆಯಲು ಅವರು ಪ್ರಯತ್ನ ಪಡುತ್ತಿದ್ದಾರೆ. ಈ ಕಾರಣದಿಂದ ಬಿಜೆಪಿ ರಾಜ್ಯಾಧ್ಯಕ್ಷ ತವರಿನಲ್ಲಿ ನಡೆಯುತ್ತಿರುವ ವಿದ್ಯಮಾನ ಬಿಜೆಪಿಗೆ ತಲೆ ನೋವು ತಂದಿದೆ.

ಇದನ್ನೂ ಓದಿ:ಮಂಡ್ಯದಲ್ಲಿ ಈ ಬಾರಿ ಬಿಜೆಪಿಗೆ ಸೆನ್ಸೇಷನಲ್ ಸರ್ಪ್ರೈಸ್‌ ರಿಸಲ್ಟ್: ಸುಮಲತಾ

ABOUT THE AUTHOR

...view details