ಮಂಗಳೂರು: ನಾಲ್ಕೂವರೆ ತಿಂಗಳ ಮಗುವನ್ನು ನೀರು ತುಂಬಿದ ಪ್ಲಾಸ್ಟಿಕ್ ಮಗ್ನಲ್ಲಿ ಮುಳುಗಿಸಿ ಕೊಂದ ತಾಯಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ. ಗುಜ್ಜರಕೆರೆಯ ಮುಹಮ್ಮದ್ ಉನೈಸ್ ಎಂಬವರ ಪತ್ನಿ ಫಾತಿಮಾ ರುಕಿಯಾ (23) ಮತ್ತು ನಾಲ್ಕೂವರೆ ತಿಂಗಳ ಮಗು ಅಬ್ದುಲ್ಲಾ ಮೃತರು ಎಂದು ಗುರುತಿಸಲಾಗಿದೆ.
ಫಾತಿಮಾ ರುಕಿಯಾ ಅವರು ಸುಮಾರು ಒಂದೂವರೆ ವರ್ಷದ ಹಿಂದೆ ಮುಹಮ್ಮದ್ ಉನೈಸ್ ಎಂಬವರನ್ನು ವಿವಾಹವಾಗಿದ್ದರು. 2023 ಜುಲೈ 7 ರಂದು ಹೆರಿಗೆಯಾಗಿತ್ತು. ಇವರಿಗೆ ಅಬ್ದುಲ್ಲಾ ಹೂದ್ ಎಂಬ ಸುಮಾರು 4 1/2 ತಿಂಗಳ ಗಂಡು ಮಗು ಇತ್ತು. ಹೆರಿಗೆಯಾದ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದು,ಫಾತಿಮಾ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತನ್ನ ತಾಯಿ ಬಳಿ ಹೇಳುತ್ತಿದ್ದರು ಎನ್ನಲಾಗಿದೆ. ಮಾನಸಿಕವಾಗಿ ನೊಂದಿದ್ದ ಅವರಿಗೆ ಮಂಗಳೂರಿನ ಅರೋಗ್ಯ ಕ್ಲಿನಿಕ್ನಲ್ಲಿ ಮಾನಸಿಕ ವೈದ್ಯರಾದ ಡಾ. ಸುಪ್ರಿಯಾ ಅವರಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಇಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1-30 ಗಂಟೆಯ ಮಧ್ಯೆ ಮನೆಯಲ್ಲಿ ಯಾರೂ ಇಲ್ಲದ ಸಮಯ ಫಾತಿಮಾ ರುಕಿಯಾ ತಾನು ವಾಸವಾಗಿದ್ದ ಮಂಗಳೂರು ನಗರದ ಗುಜ್ಜರಕೆರೆ ಲೇಕ್ ವ್ಯೂ ಅಪಾರ್ಟ್ಮೆಂಟ್ನ ಫ್ಲಾಟ್ ನಂಬರ್ 507ರ ಬೆಡ್ ರೂಮ್ನ ಗ್ಯಾಲರಿಯಲ್ಲಿ ಪ್ಲಾಸ್ಟಿಕ್ ಟಬ್ನಲ್ಲಿ ನೀರು ತುಂಬಿಸಿ ಮಗುವನ್ನು ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ. ಬಳಿಕ ತಾನೂ ಕೂಡ ರೂಮಿನ ಕಿಟಕಿಯ ಕಬ್ಬಿಣದ ಸರಳಿಗೆ ಸೀರೆಯಿಂದ ಕಟ್ಟಿ ಮತ್ತೊಂದು ತುದಿಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.