ಮಂಗಳೂರು: ಸಿರಿಯಾದ 15 ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಿದೇಶಿ ಹಡಗು ಎಂ.ವಿ.ಪ್ರಿನ್ಸಸ್ ಮಿರಾಲ್ ಮಂಗಳೂರಿನ ಬಟ್ಟಪಾಡಿ ಸಮೀಪದ ಸಮುದ್ರದಲ್ಲಿ ಮುಳುಗಡೆಯಾಗಿದೆ. ಎರಡು ದಿನಗಳ ಹಿಂದೆ ಈ ವಿದೇಶಿ ಹಡಗು ಸಣ್ಣ ರಂಧ್ರದ ಮೂಲಕ ನೀರು ಒಳನುಗ್ಗಿ ಅಪಾಯಕ್ಕೆ ಸಿಲುಕಿತ್ತು.
ಹಡಗು 8,000 ಟನ್ ಉಕ್ಕಿನ ಕಾಯಿಲ್ ತುಂಬಿಸಿಕೊಂಡು ಚೀನಾದ ಟಿಯಾಂಜಿನ್ನಿಂದ ಲೆಬನಾನ್ಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿತ್ತು. ಇದರಲ್ಲಿದ್ದ 15 ಸಿರಿಯಾ ದೇಶದ ಪ್ರಜೆಗಳನ್ನು ಮಂಗಳೂರಿನ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದರು. ಈ ಹಡಗು ಬಟ್ಟಪ್ಪಾಡಿ ಸಮೀಪದ ಸಮುದ್ರದ ನೀರಿನಲ್ಲಿ ಇದೀಗ ಮುಳುಗಡೆಗೊಂಡಿದೆ. ಹಡಗಿನ ಇಂಧನ ತೆಗೆಯುವುದು ಹೇಗೆ ಮತ್ತು ಹಡಗನ್ನು ಏನು ಮಾಡಬೇಕು ಎಂಬುದನ್ನು ನಿರ್ಧರಿಸಲು ಖಾಸಗಿ ಏಜೆಂಟ್ (ಸಿಂಗಾಪೂರ್‌ನ ಸ್ಮಿತ್-ಎಕ್ಸ್ ಪರ್ಟ್ ಕಂಪನಿ) ಪ್ರಾಥಮಿಕ ಸಮೀಕ್ಷೆ ನಡೆಸುತ್ತಿದೆ.
ಹಡಗು ಮುಳುಗಡೆಗೊಂಡ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾಡಳಿತವು ಕೋಸ್ಟ್ ಗಾರ್ಡ್ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಎಂ.ವಿ. ಪ್ರಿನ್ಸಸ್ ಮಿರಾಲ್ ಹಡಗಿನಿಂದ ತೈಲ ಸೋರಿಕೆ ಅಗದಂತೆ ತಡೆಗಟ್ಟಲು ಹಾಗೂ ಹಡಗಿನಲ್ಲಿರುವ ಫರ್ನಸ್ ಅಯಿಲ್ ಮತ್ತು ಇಂಜಿನ್ ಆಯಿಲ್ನ್ನು ಹೊರತೆಗೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋಸ್ಟ್ ಗಾರ್ಡ್ ಡಿಐಜಿಗೆ ತಿಳಿಸಲಾಗಿದೆ.