ಮಂಗಳೂರು: ಆಟೋರಿಕ್ಷಾದಲ್ಲಿ ಅಪ್ರಾಪ್ತ ಬಾಲಕಿಯನ್ನು ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಚಿಕ್ಕಮುಡ್ನೂರು ನಿವಾಸಿ ಕೆ.ಸಾಜುದ್ದೀನ್(34) ಬಂಧಿತ ಆರೋಪಿ. 10 ವರ್ಷದ ಬಾಲಕಿಯೋರ್ವಳು ನಿನ್ನೆ ಬೆಳಗ್ಗೆ 11.30 ರ ಸುಮಾರಿಗೆ ತನ್ನ ತಂದೆ ಚಲಾಯಿಸುತ್ತಿದ್ದ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಳು. ಪುತ್ತೂರು ಪೇಟೆ ತಲುಪಿದಾಗ ಸಾಜುದ್ದೀನ್ ಆಟೋರಿಕ್ಷಾ ಹತ್ತಿದ್ದಾನೆ.
ಆಟೋರಿಕ್ಷಾ ಸ್ವಲ್ಪ ದೂರ ಸಂಚಾರ ಮಾಡಿದ ಬಳಿಕ ಆರೋಪಿ ಪಕ್ಕದಲ್ಲೇ ಕುಳಿತಿದ್ದ ಬಾಲಕಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ತಕ್ಷಣ ಬಾಲಕಿ ಆರೋಪಿಯ ದುರ್ವತನೆಯ ಬಗ್ಗೆ ರಿಕ್ಷಾ ಚಲಾಯಿಸುತ್ತಿದ್ದ ತನ್ನ ತಂದೆಗೆ ತಿಳಿಸಿದ್ದಾಳೆ. ಇದಾದ ನಂತರ ಆರೋಪಿ ಆಟೋರಿಕ್ಷಾದಿಂದ ಇಳಿದು ಪರಾರಿಯಾಗಿದ್ದಾನೆ.
ಈ ಬಗ್ಗೆ ಸಂತ್ರಸ್ತ ಬಾಲಕಿಯ ತಂದೆ ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಪೊಲೀಸರು ಆರೋಪಿಯ ಮೇಲೆ ಪೊಕ್ಸೊ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಆರೋಪಿಯನ್ನು ತಕ್ಷಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.