ನೆಲ್ಯಾಡಿ (ದ.ಕ):ಜಿಲ್ಲೆಯ ಕೊಕ್ಕಡ, ನೆಲ್ಯಾಡಿ, ಅರಸಿನಮಕ್ಕಿ, ರೆಖ್ಯಾ, ಗೋಳಿತ್ತೊಟ್ಟು ಪರಿಸರದಲ್ಲಿ ತಿರುಗಾಡುತ್ತಿದ್ದ ಅನಾಥ ವ್ಯಕ್ತಿಯೊಬ್ಬರು ಸೋಮವಾರ ನಿಧನರಾಗಿದ್ದಾರೆ.
ಮೃತ ವ್ಯಕ್ತಿಯ ಹೆಸರು ಶಂಕರ್ ಎಂದಷ್ಟೇ ಇಲ್ಲಿನ ಜನರಿಗೆ ಗೊತ್ತು. ಈ ಪರಿಸರದಲ್ಲಿ ಸುಮಾರು 25 ವರ್ಷಗಳಿಗೂ ಅಧಿಕ ಕಾಲದಿಂದ ತಿರುಗಾಡುತ್ತಾ ಇಲ್ಲಿನ ಜನರು ನೀಡಿದ ತಿಂಡಿ ತಿನಸು ತಿನ್ನುತ್ತಾ, ಯಾರಿಗೂ ತೊಂದರೆ ನೀಡದೇ ತನ್ನಷ್ಟಕ್ಕೆ ತಾನು ಇರುತ್ತಿದ್ದರು.
ಇವರು ನೆಲ್ಯಾಡಿ ಪರಿಸರಕ್ಕೆ ಬಂದ ಆರಂಭಿಕ ದಿನಗಳಲ್ಲಿ ಇವರ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಇಲ್ಲಿ ಯಾವುದೋ ಮರ್ಡರ್ ಆಗಿದೆ ಅದಕ್ಕೆ ಪೊಲೀಸ್ ಇಲಾಖೆಯು ಆರೋಪಿಗಳನ್ನು ಹಿಡಿಯುವ ಸಲುವಾಗಿ ಮಾರುವೇಷದಲ್ಲಿ ಸಿಐಡಿಯಾಗಿ ಇವರನ್ನು ಕಳುಹಿಸಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಅಲ್ಲದೆ ಶಂಕರ್ ಅವರನ್ನು ಸಿಐಡಿ ಶಂಕರ್ ಎಂದೇ ಜನರು ಕರೆಯುತ್ತಿದ್ದರು.
ಕೈಯಲ್ಲೊಂದು ಕೋಲು, ಮೈ ತುಂಬಾ ಕೆಸರು ಮೆತ್ತಿಕೊಂಡ ಸದೃಡ ಮೈಕಟ್ಟು ಹೊಂದಿದ ಇವರನ್ನು ಕಂಡರೆ ಸಿಐಡಿ ರೀತಿಯಲ್ಲಿ ಬಿಂಬಿಸುತ್ತಿತ್ತು. ಹೀಗಾಗಿ ಜನರೂ ಇವರನ್ನು ಕಂಡರೆ ಭಯ ಪಡುತ್ತಿದ್ದರು. ಆದರೆ ನಿಜವಾಗಿಯೂ ಇವರು ಸಿಐಡಿ ಆಗಿರಲಿಲ್ಲ, ಬದಲಾಗಿ ಸಾಧು ಸ್ವಭಾವದ, ಮಾತು ಕಮ್ಮಿ ಆಡುವ ಅನಾಥ ವ್ಯಕ್ತಿ ಆಗಿದ್ದರು.
ಶಂಕರ್ ಭಿಕ್ಷೆ ಎತ್ತುತ್ತಿರಲಿಲ್ಲ, ಮಾಮೂಲಿಯಾಗಿ ಇವರು ಭೇಟಿ ನೀಡುವ ಕೆಲವು ನಿಗದಿತ ಅಂಗಡಿಗಳು ಇತ್ತು. ಅವರಿಗೆ ಶಂಕರ್ ದಿನಚರಿ ಗೊತ್ತಿತ್ತು. ಶಂಕರ್ ಬಂದ ಕೂಡಲೇ ಅವರು ಶಂಕರ್ಗೆ ಬೇಕಾದ ಆಹಾರ ನೀಡುತ್ತಿದ್ದರು. ಅವರಿಗೆ ಯಾರಾದರೂ ಹತ್ತು ರೂಪಾಯಿ ಕೊಟ್ಟರೆ ಅದನ್ನು ಅವರಿಗೇ ವಾಪಾಸು ಕೊಟ್ಟು ಒಂದು ರೂಪಾಯಿ ಪಡೆದುಕೊಳ್ಳುತ್ತಿದ್ದರು.
ಯಾರಿಗೂ ಶಂಕರ್ ಈ ತನಕ ಯಾವ ತೊಂದರೆನೂ ಕೊಟ್ಟವರಲ್ಲ. ಬಹಳ ವರ್ಷಗಳ ಈ ಭಾಗದ ಒಡನಾಟದ ಬಳಿಕ ಅನಾರೋಗ್ಯದ ಕಾರಣದಿಂದಾಗಿ ಶಂಕರ್ ನಿಧನ ಹೊಂದಿದ್ದಾರೆ. ಇನ್ನು ಶಂಕರ್ ನೆನಪು ಮಾತ್ರ.