ಪುತ್ತೂರು (ದ.ಕ): ಮನೆ ಸುತ್ತ ಒಂದಡಿ ಜಾಗ ಖಾಲಿ ಇದ್ದರೂ ಅದರಲ್ಲಿ ಬೇಲಿ ಹಾಕಿ ಅದರಿಂದ ಲಾಭ ಮಾಡುವ ಜನರೇ ಹೆಚ್ಚಿರುವಾಗ ಇಲ್ಲೊಬ್ಬರು 1 ಎಕರೆ ಜಾಗದಲ್ಲಿ ಮರ-ಗಿಡ ಬೆಳೆಸಿ ಅರಣ್ಯಕ್ಕಾಗಿ ಮೀಸಲಿಟ್ಟಿದ್ದಾರೆ. ಸ್ವಂತ ಖರ್ಚಿನಲ್ಲಿ ಆ ಜಾಗವನ್ನು ಅರಣ್ಯವಾಗಿಸಿ ಜೀವಸಂಕುಲಕ್ಕೆ ಪ್ರಾಣವಾಯು ನೀಡಲು ಮುಂದಾಗಿದ್ದಾರೆ. ನಿರಂತರವಾಗಿ ನಡೆಯುತ್ತಿರುವ ಪರಿಸರ ಮಾಲಿನ್ಯ, ಗಿಡ-ಮರಗಳ ಮಾರಣ ಹೋಮದಿಂದಾಗಿ ಇಂದು ಶುದ್ಧ ಗಾಳಿಯನ್ನ ಹುಡುಕಾಡಬೇಕಾದ ಸ್ಥಿತಿಯಿದೆ.
ಈ ನಡುವೆ ತನಗಲ್ಲದೆ, ಗ್ರಾಮದ ಜನರಿಗೂ ಶುದ್ಧ ಆಮ್ಲಜನಕಯುಕ್ತ ಗಾಳಿ ಸಿಗಬೇಕು ಎನ್ನುವ ಕಾಳಜಿಯ ಪರಿಸರಪ್ರೇಮಿ ಡಾ. ಶ್ರೀಶ ಕುಮಾರ್ ಈ ರೀತಿ ಅರಣ್ಯ ಬೆಳೆಸಿ ಮಾದರಿಯಾಗಿದ್ದಾರೆ. ಪುತ್ತೂರಿನ ವಿವೇಕಾನಂದ ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕರಾಗಿರುವ ಡಾ. ಶ್ರೀಶ ಕುಮಾರ್, ಮುಂದಿನ ಪೀಳಿಗೆಗೆ ಆಮ್ಲಜನಕದ ಕೊರತೆ ಕಾಡದಿರಲಿ ಎಂಬ ಉದ್ದೇಶದಿಂದ ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮೂರು ವರ್ಷಗಳ ಹಿಂದೆ ಪಾಲ್ತಾಡಿ ಗ್ರಾಮದ ಕುಂಜಾಡಿಯಲ್ಲಿ 1 ಎಕರೆ ಜಾಗ ಖರೀದಿಸಿ ಶುದ್ಧ ಪರಿಸರಕ್ಕೆ ಪೂರಕವಾದ ಗಿಡ ನೆಡುವ ಸಂಕಲ್ಪ ತೊಟ್ಟು ಅದರಲ್ಲಿ ಆರಂಭಿಕ ಯಶಸ್ಸು ಸಾಧಿಸಿದ್ದಾರೆ. ಮನೆಯಿಂದ 21 ಕಿ.ಮೀ ದೂರದಲ್ಲಿ ಜಾಗವಿದ್ದರೂ ಬಿಡುವಿನ ವೇಳೆ ಭೇಟಿ ನೀಡಿ ಪರಿಶೀಲನೆಗೆ ಮುಂದಾಗುತ್ತಾರೆ. ಈ ಆಕ್ಸಿಜನ್ ವನದಲ್ಲಿ 24 ಅಶ್ವತ್ಥ್ ಗಿಡ, ಪಚ್ಚೆ ಕರ್ಪೂರ, ನಾಗಸಂಪಿಗೆ, ನಾಗಲಿಂಗ, ಅಳಿವಿನಂಚಿನಲ್ಲಿರುವ ಗಿಡಗಳು ಸೇರಿದಂತೆ ಒಟ್ಟು 130 ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.