ಕರ್ನಾಟಕ

karnataka

ETV Bharat / state

ಕನಸಿಗೆ ಕಾವು ಕೊಟ್ಟು ನನಸು ಮಾಡಿದ 'ಮೊಟ್ಟೆ ಉದ್ಯಮ'! - Puttur news

ಕೇರಳದಿಂದ ಈ ಕೋಳಿ ಮರಿಗಳನ್ನು ಪಡೆದು ಪುತ್ತೂರಿನ ಅರಿಯಡ್ಕ ಸಮೀಪದ ಮಡ್ಯಂಗಳ ಎಂಬಲ್ಲಿ ಎರಡು ಎಕರೆ ಜಾಗವನ್ನು ಖರೀದಿಸಿ ಬ್ರೌನ್ ಕೋಳಿ ಸಾಕಾಣಿಕೆ ಆರಂಭಿಸಿದ್ದಾರೆ. ಮೊದಲಿಗೆ 200 ಕೋಳಿಗಳೊಂದಿಗೆ ಉದ್ಯಮ ಆರಂಭಿಸಿದ ಈ ಯುವಕರು, ಇದೀಗ ಕೋಳಿಗಳ ಸಂಖ್ಯೆಯನ್ನು 1200ರವರೆಗೆ ಏರಿಸಿದ್ದಾರೆ.

Puttur
ಮೊಟ್ಟೆ ಉದ್ಯಮ

By

Published : Jun 17, 2021, 7:38 AM IST

ಪುತ್ತೂರು(ದ.ಕ): ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಉದ್ಯೋಗ ದೊರಕಿಸಿಕೊಳ್ಳುವುದು ಯುವಕರ ಪಾಲಿಗೆ ಒಂದು ರೀತಿಯ ಚಾಲೆಂಜ್ ಆಗಿದೆ. ಹೀಗೆ ಪಡೆದ ಉದ್ಯೋಗದಿಂದ ಜೀವನ ನಿರ್ವಹಣೆ ಹೇಗೆ ಎನ್ನುವ ಪ್ರಶ್ನೆಯೂ ಇದರ ಜೊತೆಗೇ ಏಳುತ್ತಿವೆ.

ಈ ಎಲ್ಲಾ ಜಂಜಾಟಗಳಿಂದ ಮುಕ್ತವಾಗಬೇಕಾದರೆ ಸ್ವಂತ ಉದ್ಯೋಗದಿಂದಲೇ ಸಾಧ್ಯ ಎನ್ನುವುದನ್ನು ಮನಗಂಡ ದಕ್ಷಿಣ ಕನ್ನಡದ ಯುವಕರಿಬ್ಬರು ಹಳದಿ ಮೊಟ್ಟೆಗಳನ್ನಿಡುವ ಕೋಳಿಗಳನ್ನು ಸಾಕಿ ಮೊಟ್ಟೆ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ.

ಕನಸು ನನಸು ಮಾಡಿದ ಮೊಟ್ಟೆ ಉದ್ಯಮ

ಕೊರೊನಾ ಲಾಕ್​​ಡೌನ್ ಹಾಗೂ ಇತರ ಹಲವು ಸಮಸ್ಯೆಗಳಿಂದಾಗಿ ಇಂದು ಹಲವರ ಉದ್ಯೋಗಗಳಿಗೆ ಕುತ್ತು ಬಂದಿದೆ. ಇನ್ನು ವಿದ್ಯಾಭ್ಯಾಸ ಮುಗಿಸಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವ ಸಮುದಾಯಕ್ಕೆ ಉದ್ಯೋಗ ದೊರಕಿಸಿಕೊಳ್ಳುವುದು ಒಂದು ಚಾಲೆಂಜ್ ಆದರೆ, ಪಡೆದ ಉದ್ಯೋಗದಿಂದ ಜೀವನ ನಿರ್ವಹಣೆ ಸಾಧ್ಯವೇ ಎನ್ನುವ ಗೊಂದಲವೂ ಕಾಡತೊಡಗಿದೆ. ಇನ್ನೊಬ್ಬರ ಕೈ ಕೆಳಗೆ ದುಡಿಯುವ ಬದಲು ತಾವೇ ಏಕೆ ಒಂದು ಸಣ್ಣ ಉದ್ಯಮವನ್ನು ಆರಂಭಿಸಬಾರದು ಎಂದು ಹೊರಟ ಯುವಕರೇ ಅರಿಯಡ್ಕ ಗ್ರಾಮದ ಚಂದ್ರಕಾಂತ್ ಮತ್ತು ವಿಲ್ಸನ್ ವಿಜಯ್. ವಿಭಿನ್ನ ರೀತಿಯ ಚಿಂತನೆಯ ಮೂಲಕ ಕೋಳಿ ಸಾಕಾಣಿಕೆ ಆರಂಭಿಸಿದ್ದಾರೆ.

ಅಂದಹಾಗೆ ಮಾರುಕಟ್ಟೆಯಲ್ಲಿ ಅನಾಯಾಸವಾಗಿ ಸಿಗುವ ಮೊಟ್ಟೆಗಳಿಗಿಂತ ಈ ಮೊಟ್ಟೆಗಳು ಕೊಂಚ ಭಿನ್ನ. ಊರ ಕೋಳಿ ಇಡುವ ಕಂದು ಬಣ್ಣದ ಮೊಟ್ಟೆಗಳನ್ನು ಹೋಲುವ ಈ ಮೊಟ್ಟೆ ಅತ್ಯಂತ ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿದೆ. ಉದ್ಯಮ ಆರಂಭಿಸುವ ಮೊದಲು ಕೊಂಚ ಭಿನ್ನವಾದುದನ್ನೇ ಮಾಡಬೇಕು ಎಂದು ಫೀಲ್ಡ್​ಗಿಳಿದಿದ್ದ ಈ ಯುವಕರು, ಬ್ರೌನ್ ಬಣ್ಣದ ಕೋಳಿ ಮೊಟ್ಟೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇರುವುದನ್ನು ಮನಗಂಡಿದ್ದಾರೆ.

ಬ್ರೌನ್ ಕೋಳಿ ಫಾರ್ಮ್​

ಕೇರಳದಿಂದ ಈ ಕೋಳಿ ಮರಿಗಳನ್ನು ಪಡೆದು ಪುತ್ತೂರಿನ ಅರಿಯಡ್ಕ ಸಮೀಪದ ಮಡ್ಯಂಗಳ ಎಂಬಲ್ಲಿ ಎರಡು ಎಕರೆ ಜಾಗವನ್ನು ಖರೀದಿಸಿ ಬ್ರೌನ್ ಕೋಳಿ ಸಾಕಾಣಿಕೆ ಆರಂಭಿಸಿದ್ದಾರೆ. ಮೊದಲಿಗೆ 200 ಕೋಳಿಗಳೊಂದಿಗೆ ಉದ್ಯಮ ಆರಂಭಿಸಿದ ಈ ಯುವಕರು, ಇದೀಗ ಕೋಳಿಗಳ ಸಂಖ್ಯೆಯನ್ನು 1200ರವರೆಗೆ ಏರಿಸಿದ್ದಾರೆ. ಈ ಕೋಳಿಗಳ ವಿಶೇಷವೆಂದರೆ ಇವು ವರ್ಷವಿಡೀ ಮೊಟ್ಟೆ ಇಡುತ್ತಿದ್ದು, ಮಾರುಕಟ್ಟೆಯಲ್ಲಿ ಪ್ರತೀ ಮೊಟ್ಟೆಗೆ 10 ರೂಪಾಯಿ ಬೆಲೆಯಿದೆ.

ಪ್ರತೀ ಕೋಳಿ ಮರಿಗಳನ್ನು 350 ರೂಪಾಯಿಗಳಂತೆ ಖರೀದಿಸಲಾಗಿದ್ದು, 4 ತಿಂಗಳ ಸಾಕಾಣಿಕೆಯ ಬಳಿಕ ಈ ಕೋಳಿಗಳು ಮೊಟ್ಟೆ ಇಡಲು ಆರಂಭಿಸುತ್ತವೆ. ಕೇವಲ ಕೋಳಿ ಮೊಟ್ಟೆಗಳನ್ನಲ್ಲದೆ, ಇರುವ ಜಾಗದಲ್ಲಿ ತರಕಾರಿ ಹಾಗೂ ಹಣ್ಣುಗಳನ್ನೂ ಬೆಳೆಯುತ್ತಿದ್ದಾರೆ. ತೈವಾನ್ ಪಪ್ಪಾಯ, ಪೈನಾಪಲ್, ವಿಶಿಷ್ಟ ರೀತಿಯಲ್ಲಿ ಚಪ್ಪರ ನಿರ್ಮಿಸಿ ಬೆಳೆಸುತ್ತಿರುವ ತೊಂಡೆಕಾಯಿ ಹೀಗೆ ಹಲವು ರೀತಿಯ ಕೃಷಿಯಲ್ಲಿ ತೊಡಗಿಕೊಳ್ಳುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.

ಬ್ರೌನ್ ಕೋಳಿ ಮೊಟ್ಟೆಗಳು

ಇತ್ತೀಚಿನ ದಿನಗಳಲ್ಲಿ ಯುವ ಜನತೆ ಕೃಷಿ ಚಟುವಟಿಕೆಯತ್ತ ವಾಲುತ್ತಿದ್ದು, ಇದೇ ಹಾದಿಯಲ್ಲಿ ಪುತ್ತೂರಿನ ಈ ಯುವಕರೂ ನಡೆಯುತ್ತಿದ್ದಾರೆ. ಉದ್ಯೋಗದ ನಿರೀಕ್ಷೆಯಲ್ಲಿ ತಮ್ಮ ಸಮಯವನ್ನು ಹಾಳು ಮಾಡುವ ಬದಲು ಪುತ್ತೂರಿನ ಈ ಯುವಕರಂತೆ ಸ್ವಾವಲಂಬಿ ಜೀವನ ಸಾಗಿಸುವತ್ತ ಯುವಕರು ಚಿತ್ತ ಹರಿಸಬೇಕಿದೆ ಅಂತಾರೆ ಸಾಮಾಜಿಕ ಕಾರ್ಯಕರ್ತ ಆರ್.ಸಿ.ನಾರಾಯಣ್.

ಅತ್ಯಂತ ಕಡಿಮೆ ಬಂಡವಾಳ ಹಾಕಿ ಈ ಉದ್ಯಮ ಆರಂಭಿಸಿದ ಯುವಕರು, ಕೋಳಿ ಮೊಟ್ಟೆಗಳನ್ನು ರಾಜ್ಯದ ವಿವಿಧ ಮಾರುಕಟ್ಟೆಗಳಿಗೆ ಪರಿಚಯಿಸುವ ಮೂಲಕ ಯಶಸ್ವಿಯ ಮೆಟ್ಟಿಲೇರುತ್ತಿದ್ದಾರೆ.

ಇದನ್ನೂ ಓದಿ:'ಮೈಲಾರ್ಡ್' ಬೇಡ, 'ಮೇಡಂ' ಸಾಕು : ಹೈಕೋರ್ಟ್ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಮನವಿ

For All Latest Updates

ABOUT THE AUTHOR

...view details