ಮಂಗಳೂರು: ಬೆಳೆ ಕೈಗೆ ಬಂದರೂ ಕರ್ಫ್ಯೂ ಕಾರಣದಿಂದ ಮಾರಲಾಗದೆ ಆರ್ಥಿಕ ಸಮಸ್ಯೆಯಾಗಿದೆ ಎಂದು ರೈತರೋರ್ವರು ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದಾರೆ.
ನಗರದ ಹೊರವಲಯ ಬಳ್ಕುಂಜೆ ಗ್ರಾಮದ ಸುನಿಲ್ ಶೆಟ್ಟಿ ಎಂಬ ರೈತ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ನಾನು ಒಂದು ಎಕರೆ ಜಮೀನಿನಲ್ಲಿ ಬೂದು ಕುಂಬಳಕಾಯಿ ಬೆಳೆದಿದ್ದು, ಫಸಲು ಮಾರಾಟಕ್ಕೆ ಯೋಗ್ಯವಾಗಿದೆ. ಆದರೆ, ಕರ್ಫ್ಯೂನಿಂದಾಗಿ ಯಾರೂ ಖರೀದಿಗೆ ಮುಂದೆ ಬರುತ್ತಿಲ್ಲ. ಕಳೆದ ಬಾರಿ ಲಾಕ್ ಡೌನ್ ಆದಾಗಲೂ ಇದೇ ರೀತಿ ಸಂಕಷ್ಟ ಎದುರಿಸಿದ್ದೆ ಎಂದು ರೈತ ಸುನಿಲ್ ಶೆಟ್ಟಿ ವಿಡಿಯೋದಲ್ಲಿ ಅಲವತ್ತುಕೊಂಡಿದ್ದಾರೆ.
ಈ ಬಾರಿ ಸುನಿಲ್ ಶೆಟ್ಟಿಯವರು 10 ರಿಂದ 11 ಟನ್ ಬೂದು ಕುಂಬಳಕಾಯಿ ಬೆಳೆದಿದ್ದು, ಒಂದೂ ಮಾರಾಟವಾಗಿಲ್ಲ. ಇಷ್ಟು ಪ್ರಮಾಣದಲ್ಲಿ ಬೂದು ಕುಂಬಳ ಬೆಳೆಯಲು ನನಗೆ 50-60 ಸಾವಿರ ರೂ. ಖರ್ಚು ತಗುಲಿದೆ. ಈ ವಿಡಿಯೋ ನೋಡಿದವರು ಕುಂಬಳಕಾಯಿ ಮಾರಲು ನನಗೆ ಸಹಾಯ ಮಾಡಿ. ಕೆಜಿಗೆ 10 ರೂ. ಕೊಟ್ಟರೂ ಸಾಕು, ನನ್ನ ಅಸಲು ಕೈಗೆ ಬರುತ್ತದೆ. ನನಗೆ ಸಹಾಯ ಮಾಡಲಿಚ್ಚಿಸುವವರು 9980439916 ಮೊಬೈಲ್ ಸಂಖ್ಯೆಗೆ ಕರೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.