ಬಂಟ್ವಾಳ(ದ.ಕ): ಕಳೆದ ಬೇಸಿಗೆಯಲ್ಲಿ ನೀರಿಲ್ಲದೆ ಸಂಕಷ್ಟ ಎದುರಿಸಿದ್ದ ರೈತನೊಬ್ಬ, ಈ ಬಾರಿ ಲಾಕ್ಡೌನ್ನನ್ನು ಸದುಪಯೋಗ ಮಾಡಿಕೊಂಡು ಏಕಾಂಗಿಯಾಗಿ 40 ಅಡಿ ಆಳದ ಬಾವಿ ಕೊರೆದಿದ್ದಾರೆ. ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ಪೊರ್ಸಪಾಲು ನಿವಾಸಿ ನೋಣಯ್ಯ ಪೂಜಾರಿ ಈ ಸಾಧನೆ ಮಾಡಿರುವ ಕೃಷಿಕ.
ಕೃಷಿ ಮಾಡಲೆಂದು ಅಡಿಕೆ ಗಿಡಗಳನ್ನು ನೆಟ್ಟಿದ್ದು, ಅವುಗಳಿಗೆ ನೀರಿಲ್ಲದೆ ಕಳೆದ ಬೇಸಿಗೆಯಲ್ಲಿ ಸಂಕಷ್ಟ ಅನುಭವಿಸಿದ್ದರು. ಈ ಬೇಸಿಗೆಯಲ್ಲಿ ಹಾಗಾಗಬಾರದು ಎಂದು ಯೋಚಿಸಿ, ತನ್ನ ಜಾಗದಲ್ಲಿ ಬಾವಿ ನಿರ್ಮಿಸಲು ಹೊರಟಾಗ ಲಾಕ್ಡೌನ್ ಆರಂಭವಾಯಿತು. ಆರ್ಥಿಕ ಮುಗ್ಗಟ್ಟು, ಕೂಲಿ ಕಾರ್ಮಿಕರ ಕೊರತೆಗೆ ಬೆದರದೆ, ಸ್ವತಃ ಬಾವಿ ತೋಡಿ 21 ದಿನಗಳಲ್ಲಿ 40 ಅಡಿ ಆಳ ಕೊರೆದು, ಗಿಡಗಳಿಗೆ ನೀರುಣಿಸಲು ತಯಾರಾಗಿದ್ದಾರೆ.
ಏಕಾಂಗಿಯಾಗಿ 40 ಅಡಿ ಆಳದ ಬಾವಿ ಕೊರೆದ ರೈತ ಕೃಷಿ ಕಾರ್ಯಗಳನ್ನು ಮಾಡುವುದು, ಬೀಡಿ ಕಟ್ಟುವುದು, ಪೂಜೆ ಕೆಲಸಗಳಿಗೆ ಸಹಾಯಕರಾಗಿ ಹೋಗುವುದು ನೋಣಯ್ಯ ಪೂಜಾರಿ ಅವರ ಕಾಯಕವಾಗಿದೆ. ಆದರೆ ಲಾಕ್ಡೌನ್ ಎಲ್ಲದಕ್ಕೂ ಬ್ರೇಕ್ ನೀಡಿದ್ದರಿಂದ, ಆದಾಯದ ಕೊರತೆ ಕಾಡಿತು. ಮನೆಯಲ್ಲಿ ಮಡದಿ, ಮೂರು ಮಕ್ಕಳೊಂದಿಗೆ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಯಿತು. ಆದರೆ ಇದಕ್ಕೆಲ್ಲಾ ಧೃತಿಗೆಡದ ನೋಣಯ್ಯ ಪೂಜಾರಿ, ತಮ್ಮ ಜಮೀನಿಗೆ ಸಂಬಂಧಪಟ್ಟ ಗುಡ್ಡ ಪ್ರದೇಶದಲ್ಲಿ ಪತ್ನಿ ಹಾಗು ಮೂವರು ಮಕ್ಕಳ ಸಹಾಯದೊಂದಿಗೆ ಬಾವಿ ನಿರ್ಮಿಸಿದ್ದಾರೆ. ಏಪ್ರಿಲ್ 25 ರಂದು ಬಾವಿ ತೋಡಲು ಆರಂಭಿಸಿದ್ದು, ಮೇ 16ಕ್ಕೆ 40 ಅಡಿ ಆಳ ಕೊರೆದಾಗ 10 ಬಕೆಟ್ ನೀರು ಸಿಕ್ಕಿದೆ.
ಐದು ವರ್ಷದ ಹಿಂದೆ 40 ಅಡಿಕೆ ಗಿಡ ನೆಟ್ಟಿದ್ದು, ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಬಾವಿ ನಿರ್ಮಿಸಲು ರೈತ ಮುಂದಾಗಿದ್ದರು. ಮೊದಲ ಏಳು ದಿನ ಅರ್ಧ ದಿನ ಕೆಲಸ ಮಾಡಿದರೆ, ಸಂಕ್ರಾಂತಿ ಸಹಿತ ಮೂರು ದಿನ ಹೊರತುಪಡಿಸಿದರೆ, ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ಬಾವಿ ತೋಡಿದ್ದಾರೆ. ಮಗ, ಪತ್ನಿ ಹಾಗೂ ಇಬ್ಬರು ಪುತ್ರಿಯರು ಸೇರಿ ಬಾವಿ ತೋಡುವ ಕಾರ್ಯವನ್ನು ನಿಷ್ಠೆಯಿಂದ ಮಾಡಿದ್ದಾರೆ. ಶನಿವಾರ 10 ಬಕೆಟ್ ನೀರು ಸಿಕ್ಕಿರುವುದು ಈ ಕುಟುಂಬಕ್ಕೆ ಸಂತಸ ಮೂಡಿಸಿದೆ.