ಕರ್ನಾಟಕ

karnataka

ETV Bharat / state

ಕಡಬದಲ್ಲಿ ವಿಕಲಚೇತನನ ಮೇಲೆ ಹರಿದ ಕಾರು: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು - kadaba accident

ತೆವಳಿಕೊಂಡು ರಸ್ತೆ ದಾಟುತ್ತಿದ್ದ ವೇಳೆ ವಿಕಲಚೇತನನ ಮೇಲೆ ಕಾರು ಹರಿದ ಪರಿಣಾಮ ಚಿಕಿತ್ಸೆ ಫಲಿಸದೆ ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ವಿಕಲಚೇತನ ಮೇಲೆ ಹರಿದ ಕಾರು
ವಿಕಲಚೇತನ ಮೇಲೆ ಹರಿದ ಕಾರು

By ETV Bharat Karnataka Team

Published : Dec 16, 2023, 10:58 AM IST

Updated : Dec 16, 2023, 2:42 PM IST

ವಿಕಲಚೇತನನ ಮೇಲೆ ಹರಿದ ಕಾರು

ಕಡಬ (ದಕ್ಷಿಣ ಕನ್ನಡ): ಇಲ್ಲಿನ ಮುಖ್ಯ ಪೇಟೆಯಲ್ಲಿ ತೆವಳಿಕೊಂಡು ಹೋಗುತ್ತಿದ್ದ ವಿಕಲಚೇತನರೊಬ್ಬರ ಮೇಲೆ ಕಾರೊಂದು ಹರಿದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ಕಡಬದ ಅಂಗಡಿ ಮನೆ ನಿವಾಸಿ ಧರ್ನಪ್ಪ ಎಂಬವರು ಮೃತರು ಎಂದು ಗುರುತಿಸಲಾಗಿದೆ. ಮುಂಬೈ ಮೂಲದ ಕುಟುಂಬವೊಂದು ಮಂಗಳೂರಿನಿಂದ ಬಾಡಿಗೆ ಕಾರಲ್ಲಿ ಕಡಬ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಕಡಬದ ಮುಖ್ಯ ಸರ್ಕಲ್ ಸಮೀಪ ರಸ್ತೆ ದಾಟಲು ಯತ್ನಿಸುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಧರ್ನಪ್ಪ ಅವರಿಗೆ ತಲೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತರ ಸಹೋದರ ಕಡಬ ಪೊಲೀಸ್ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪ್ರತ್ಯೇಕ ಘಟನೆ, ಕೆಎಸ್​ಆರ್​ಟಿಸಿ ಅಧಿಕಾರಿ ಆತ್ಮಹತ್ಯೆ

ಪುತ್ತೂರು:ಪುತ್ತೂರು ಕೆಎಸ್​ಆರ್​ಟಿಸಿ ಘಟಕದಲ್ಲಿ ಸಂಚಾರ ನಿಯಂತ್ರಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಭಾರತೀಯ ಮಜ್ದೂರ್ ಸಂಘದ ಮುಖಂಡ ಶಾಂತಾರಾಮ ಶೆಟ್ಟಿ ವಿಟ್ಲ (62) ಅವರು ಶುಕ್ರವಾರ ಸಂಜೆ ಪುತ್ತೂರು ನಗರದ ಬಪ್ಪಳಿಗೆಯಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಾಂತಾರಾಮ ಶೆಟ್ಟಿ ವಿಟ್ಲ ಮೂಲತಃ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಸಾಲೆತ್ತೂರಿನವರಾಗಿದ್ದು, ಪುತ್ತೂರಿನ ಬಪ್ಪಳಿಗೆಯಲ್ಲಿ ನೆಲೆಸಿದ್ದರು. ಶುಕ್ರವಾರ ಪತ್ನಿ ಕಾರ್ಯಕ್ರಮವೊಂದರ ನಿಮಿತ್ತ ಹೊರ ಹೋಗಿದ್ದ ಸಂದರ್ಭದಲ್ಲಿ ಅವರು ಮನೆಯೊಳಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಶಾಂತಾರಾಮ ವಿಟ್ಲ ಅವರು ಪುತ್ತೂರು ಕೆಎಸ್​ಆರ್​ಟಿಸಿ ವಿಭಾಗದಲ್ಲಿ ಹಲವು ವರ್ಷಗಳ ಕಾಲ ಬಸ್ ನಿರ್ವಾಹಕರಾಗಿ, ಬಳಿಕ ಪುತ್ತೂರು ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಸಂಚಾರ ನಿಯಂತ್ರಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದರು. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಪುತ್ತೂರಿನ ಭವಾನಿಶಂಕರ ದೇವಳ ರಸ್ತೆಯಲ್ಲಿ ಆನ್‌ಲೈನ್ ಸೇವೆಗಳ ಅಂಗಡಿ ತೆರೆದಿದ್ದರೂ ಕಳೆದ ಒಂದು ವಾರದಿಂದ ಅಂಗಡಿಯನ್ನು ಮುಚ್ಚಲಾಗಿತ್ತು.

ಕೆಎಸ್​ಆರ್​ಟಿಸಿ ಮಜ್ದೂರ್ ಸಂಘದ ಜಿಲ್ಲಾ ವಕ್ತಾರ ಹಾಗೂ ರಾಜ್ಯ ಕಾರ್ಯದರ್ಶಿಯಾಗಿದ್ದ ಶಾಂತಾರಾಮ ವಿಟ್ಲ ಅವರು ಹಲವು ಸಂದರ್ಭಗಳಲ್ಲಿ ಕೆಎಸ್​ಆರ್​ಟಿಸಿ ನೌಕರರ ಪರವಾಗಿ ಹೋರಾಟ ನಡೆಸಿ ನ್ಯಾಯ ಒದಗಿಸುವ ಕೆಲಸ ಮಾಡಿದ್ದರು. ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ವ್ಯವಸ್ಥೆಯ ವಿರುದ್ಧವಾಗಿ ಪುತ್ತೂರಿನಲ್ಲಿ ಹಲವಾರು ಬಾರಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಇದರೊಂದಿಗೆ ಸಮಾಜಮುಖಿ-ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ಕಾರು ಸ್ಕೂಟರ್​ ಅಪಘಾತ:ಇಲ್ಲಿನ ಕಳಾರ ಸಮೀಪ ಕಾರು ಮತ್ತು ಸ್ಕೂಟರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಶಾಲಾ ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಡಿ.15 ರ ರಾತ್ರಿ ನಡೆದಿತ್ತು. ಕಾಣಿಯೂರು ಮೂಲದ ಪ್ರಸ್ತುತ ಕಳಾರದಲ್ಲಿ ವಾಸವಿರುವ ಚಂದ್ರಶೇಖರ ಅವರ ಪುತ್ರ, ಸರಸ್ವತಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಬಿಪಿನ್ ಮೃತಪಟ್ಟ ಬಾಲಕ. ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಸ್ ಆಗುತ್ತಿದ್ದ ವೇಳೆ ತಮ್ಮ ನಿವಾಸಕ್ಕೆ ತಲುಪುವ ಸುಮಾರು ನೂರು‌ ಮೀಟರ್ ಅಂತರದಲ್ಲಿ ಈ ಅಪಘಾತ ನಡೆದಿತ್ತು.

ಇದನ್ನೂ ಓದಿ:ಕರ್ನಾಟಕದ ಅಯ್ಯಪ್ಪ ಭಕ್ತರಿದ್ದ ಬಸ್​-ಆಟೋ ಮಧ್ಯೆ ಅಪಘಾತ; ಐವರು ಸಾವು

Last Updated : Dec 16, 2023, 2:42 PM IST

ABOUT THE AUTHOR

...view details