ಬೆಳ್ತಂಗಡಿ:ಆಫ್ರಿಕನ್ ಬಸವನ ಹುಳು ನಿರ್ಮೂಲನೆ ಸವಾಲಾಗಿರುವ ನಡುವೆಯೂ ನಾಶಪಡಿಸಬಹುದಾದ ಕ್ರಮಗಳನ್ನು ರೈತರು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದಲ್ಲಿ ಬಾಧೆಗೊಳಗಾದ ಪ್ರದೇಶ ಮತ್ತೆ ಕೃಷಿ ಚಟುವಟಿಕೆಗೆ ಯೋಗ್ಯವಾಗಲಿದೆ ಎಂದು ಮಂಗಳೂರು ಕೆವಿಕೆ ಸಸ್ಯ ಸಂರಕ್ಷಣಾ ವಿಜ್ಞಾನಿ ಕೇದರನಾಥ್ ತಿಳಿಸಿದರು.
ಉರುವಾಲು ಗ್ರಾಮದಾದ್ಯಂತ ವ್ಯಾಪಿಸಿದ ಆಫ್ರಿಕನ್ ಬಸವನ ಹುಳುಗಳ ನಿವಾರಣೆ ಸಲುವಾಗಿ ಬುಧವಾರ ಕೃಷಿ ವಿಜ್ಞಾನ (ಕೆವಿಕೆ), ಮಂಗಳೂರು ವಿಜ್ಞಾನಿಗಳು ಹಾಗೂ ತಾಲೂಕು ತೋಟಗಾರಿಕೆ ಇಲಾಖೆ ಅಧಿಕಾರಿಗಳ ತಂಡ ಹಲೇಜಿ ಕೃಷಿಕ ಸುಭಾಷ್ ಕೆ.ಎನ್ ಅವರ ಮನೆಯಲ್ಲಿ ನಡೆಸಿದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷಿ ತೋಟಗಳಲ್ಲಿ ರೋಗಕ್ಕೆ ತುತ್ತಾದ ಪ್ರದೇಶಗಳನ್ನು ಪತ್ತೆ ಹಚ್ಚಿ 100 ಚದರ ಅಡಿ ಪ್ರದೇಶಲ್ಲಿ 50 - 80 ಗ್ರಾಂ. ಮೆಟಾಲ್ಡಿಹೈಡ್ ರಾಸಾಯನಿಕ ಸಣ್ಣ ಸಣ್ಣ ತುಣುಕುಗಳನ್ನು 1 ಎಕರೆ ತೋಟದಲ್ಲಿ 40 ಕಡೆ ಇಡುವ ವಿಧಾನವನ್ನು ರೈತರಿಗೆ ತಿಳಿಸಿದರು. ಇದಲ್ಲದೇ ಗೋಣಿಗಳನ್ನು ಸ್ಲೆರಿ ನೀರಿನಲ್ಲಿ ಅದ್ದಿ ತೆಗೆದು ತೋಟದಲ್ಲಿ 4 ಇಂಚು ಎತ್ತರದಲ್ಲಿ ಇಟ್ಟು ಪಪ್ಪಾಯ ಅಥವಾ ಅನನಾಸ್, ಎಲೆ ಕೋಸು ತುಂಡುಗಳನ್ನು ಮಿಥೊಮೈಲ್ ಕೀಟನಾಶಕದಲ್ಲಿ ಲೇಪಿಸಿ ಅಡಕೆ ಹಾಳೆಗಳಲ್ಲೂ ಇಡಬಹುದಾಗಿದೆ. ಸಾಯಂಕಾಲದ ಸಮಯದಲ್ಲಿ ಹುಳುಗಳು ಇವನ್ನು ತಿಂದು ಸಾಯುತ್ತವೆ. ಈ ಮೂಲಕವೂ ಆಫ್ರಿಕನ್ ಬಸವನ ಹುಳುಗಳನ್ನು ನಾಶಪಡಿಸಬಹುದು. ಐರನ್ ಫಾಸೇಟ್ ಅಥವಾ ಫೆರಿಕ್ ಸೋಡಿಯಂ ಬಳಸುವ ವಿಧಾನವನ್ನು ಪ್ರಾತ್ಯಕ್ಷಿಕೆಯಲ್ಲಿ ಮಾಹಿತಿ ನೀಡಿದರು.
ಬೆಳ್ತಂಗಡಿ ತೋಟಗಾರಿಕೆ ಇಲಾಖೆ ಪ್ರಭಾರ ಸಹಾಯಕ ತೋಟಗಾರಿಕೆ ಅಧಿಕಾರಿ ಮಂಜುನಾಥ್ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ರೈತರು ತಮ್ಮ ಮೂಲ ಸಮಸ್ಯೆಗಳ ಕುರಿತು ಹಾಗೂ ವೈಜ್ಞಾನಿಕವಾಗಿ ಅಳವಡಿಸುವಲ್ಲಿಯೂ ಇರುವ ತೊಡಕುಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕೆವಿಕೆ ಹಿರಿಯ ವಿಜ್ಞಾನಿಗಳು
ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಸಂಜೆ 5ರಿಂದ 6ಗಂಟೆವರೆಗೆ ಭಾಗವಹಿಸಿದ 50 ಕ್ಕೂ ಅಧಿಕ ರೈತರಿಗೆ ಆಫ್ರಿಕನ್ ಬಸವನ ಹುಳುಗಳ ನಿವಾರಣೆ ಕುರಿತು ಸಂಪೂರ್ಣ ಪ್ರಾತ್ಯಕ್ಷಿಕೆ ನೀಡಿದರು.10 ರೈತರಂತೆ ವಿಂಗಡಿಸಿ ಮಾಹಿತಿ ನೀಡಿದರು. ಇದರೊಂದಿಗೆ ಕೃಷಿ ವಿಜ್ಞಾನ ಕೆಂದ್ರದ ತೋಟಗಾರಿಕೆ ವಿಜ್ಞಾನಿ ರಶ್ಮಿ ಬೆಳೆ ಸಮೀಕ್ಷೆ ಆ್ಯಪ್ ಬಗ್ಗೆ ರೈತರಿಗೆ ಸ್ಥಳದಲ್ಲೇ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಹಲವು ಸಂಕಷ್ಟಗಳ ನಡುವೆ ರೈತರು ಈಗಾಗಲೆ ಬೆಳೆದ ಬೆಳೆ ಕೈಸೇರದಂತಾಗಿದೆ. ಈ ನಡುವೆ ಪರಿಣಾಮಕಾರಿ ಅನುಷ್ಠಾನಕ್ಕೆ ಮೆಟಾಲ್ಡಿಹೈಡ್‌ನ್ನು ಒಂದು ಎಕರೆಗೆ 400 ಕಡೆಗಳಲ್ಲಿ ಇಡಬೇಕಿದೆ. ಅಂದರೆ 10 ಎಕರೆಗೆ 4 ಸಾವಿರ ಕಡೆಗಳಲ್ಲಿ ಇಡಬೇಕು. ಒಂದು ಎಕರೆಗೆ 4 ಕೆ.ಜಿ.ಯಂತೆ 10 ಎಕರೆಗೆ 20 ಕೆ.ಜಿ. ಮೆಟಾಲ್ಡಿಹೈಡ್ ಬೇಕಾಗಲಿದೆ. ಒಂದು ಕೆ.ಜಿ. ಮೆಟಾಲ್ಡಿಹೈಡ್ ರಾಸಾಯನಿಕಕ್ಕೆ 600 ರೂ. ಇದೆ. 10 ಎಕರೆ ಪ್ರದೇಶಕ್ಕೆ 40 ಕೆ.ಜಿ. ಇಟ್ಟಲ್ಲಿ 24 ಸಾವಿರ ರೂ ಖರ್ಚು ತಗುಲಲಿದೆ. ಬಸವನ ಹುಳು ನಿವಾರಣೆಗೆ ಈ ರೀತಿ ಮಾಡುವುದರಿಂದ ರೈತ ಸಾಲದ ಸುಳಿಗೆ ಸಿಲುಕಬೇಕಾಗುತ್ತದೆ. ಇದರಿಂದ ಸರ್ಕಾರದ ಮಟ್ಟದಲ್ಲೇ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಕೃಷಿಕರಾದ ಮುಂಚೇರಿ ಮಾಯ್ಲಪ್ಪ ಗೌಡ ಅವರು ಅಧಿಕಾರಿಗಳಿಗೆ ತಿಳಿಸಿದಾಗ ಈ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.